Tuesday, July 1, 2025
Homeಬೆಂಗಳೂರುಬೆಂಗಳೂರಲ್ಲಿ ಮಿತಿಮೀರಿದ ಕಳ್ಳರ ಹಾವಳಿ : ಮನೆ, ವಾಹನ, ಚಿನ್ನಾಭರಣ ದೋಚಿದ ಖದೀಮರ ಸೆರೆ

ಬೆಂಗಳೂರಲ್ಲಿ ಮಿತಿಮೀರಿದ ಕಳ್ಳರ ಹಾವಳಿ : ಮನೆ, ವಾಹನ, ಚಿನ್ನಾಭರಣ ದೋಚಿದ ಖದೀಮರ ಸೆರೆ

Bengaluru

ಬೆಂಗಳೂರು,ಜು.1-ಮನೆಯೊಂದರ ಪ್ಯಾಸೇಜ್‌ ಹತ್ತಿ ಅಡುಗೆ ಮನೆಯ ಯುಟಿಲಿಟಿ ಡೋರ್‌ನ್ನು ಮುರಿದು ಒಳನುಗ್ಗಿ ಹಣ-ಆಭರಣಗಳನ್ನು ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಆರೋಪಿ ಸೇರಿ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 58.60 ಲಕ್ಷ ರೂ. ಮೌಲ್ಯದ 537 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿವಸ್ತುಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬಿಇಎಂಎಲ್‌ 5ನೇ ಹಂತದಲ್ಲಿ ವಾಸವಿರುವ ದಂಪತಿ ಪ್ರೆಸ್ಟೇಜ್‌ ಬಾಗಮನೆ ಅಪಾರ್ಟ್‌ಮೆಂಟ್‌ನಲ್ಲಿರುವ ಮಗನ ಮನೆಗೆ ಹೋಗಿದ್ದರು. ನಂತರ ಮನೆಗೆ ವಾಪಸ್ಸಾದಾಗ ಕೊಠಡಿಯ ಬೀರು ತೆರೆದಿರುವುದನ್ನು ಗಮನಿಸಿದಾಗ ಅದರಲ್ಲಿದ್ದ ಹಣ ಹಾಗೂ ಚಿನ್ನಾಭರಣ, ಬೆಳ್ಳಿವಸ್ತುಗಳು ಕಳವಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Read this : ನಕಲಿ ಕೀ ಬಳಸಿ ಬೆಂಗಳೂರಲ್ಲಿ ಬರೋಬ್ಬರಿ 133 ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳನ ಬಂಧನ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಬಿಇಎಂಎಲ್‌ 5ನೇ ಹಂತದ 2ನೇ ಕ್ರಾಸ್‌‍ನಲ್ಲಿ ವ್ಯಕ್ತಿಯೊಬ್ಬನನ್ನು ಹಾಗೂ ರಾಜರಾಜೇಶ್ವರಿ ದೇವಸ್ಥಾನದ ಬಳಿ ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ, ಮನೆಗಳ್ಳತನ ಮಾಡಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ನಗರತ್‌ಪೇಟೆಯ ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ತಮಿಳುನಾಡಿನ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಒಟ್ಟಾರೆ 537.94 ಗ್ರಾಂ ಚಿನ್ನಾಭರಣ, 7 ಕೆಜಿ 840 ಗ್ರಾಂ ಬೆಳ್ಳಿವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ರಾಜರಾಜೇಶ್ವರಿನಗರ ಪೊಲೀಸ್‌‍ ಠಾಣೆಯ 6 ಮನೆಕನ್ನ ಕಳವು ಪ್ರಕರಣಗಳು ಹಾಗೂ ವಿಜಯನಗರ ಪೊಲೀಸ್‌‍ ಠಾಣೆಯ ಒಂದು ಮನೆಕನ್ನ ಕಳವು ಸೇರಿದಂತೆ ಒಟ್ಟು 7 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಪಾರ್ಕಿಂಗ್‌, ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನ ಕದಿಯುತ್ತಿದ್ದವನ ಬಂಧನ
ಮುಂಜಾನೆ ಬೇಗ ಎದ್ದು ದೇವರ ಮುಖ ನೋಡಿ ಒಳ್ಳೆ ಕೆಲಸ ಪ್ರಾರಂಭಿಸು ಎನ್ನುತ್ತಾರೆ ಆದರೆ ಚೋರನೊಬ್ಬ ನಗರದ ವಿವಿಧೆಡೆ ಪಾರ್ಕಿಂಗ್‌ ಜಾಗ,ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ಕಳವು ಮಾಡುತ್ತಿದ್ದ ಆಂಧ್ರ ಮೂಲದ ಆರೋಪಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕಿನ ನಿವಾಸಿ ಹೇಮಂತ್‌ (23) ಬಂಧಿತ ಆರೋಪಿ.ಈತ ಪ್ರತಿ ದಿನ ಮುಂಜಾನೆ ಎದ್ದು ನೇರವಾಗಿ ಬಸ್‌‍ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ನಂತರ ದ್ವಿಚಕ್ರ ವಾಹನಕಳವು ಮಾಡಿ ಪರಾರಿಯಾಗುತ್ತಿದ್ದ ಹೀಗೆ ಕಳವು ಮಾಡಿದ್ದ 40 ಲಕ್ಷ ರೂ ಮೌಲ್ಯದ 32 ದ್ವಿಚಕ್ರವಾಹನವನ್ನು ಎಚ್‌ಎಎಲ್‌ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹೆಚ್‌.ಎ.ಎಲ್‌ ಪೊಲೀಸ್‌‍ ಠಾಣಾ ಸರಹದ್ದಿನ ವಿಭೂತಿಪುರದಲ್ಲಿ ವಾಸವಾಗಿರುವ ವ್ಯಕ್ತಿ ಕಳೆದ ಜೂನ್‌.6 ರಂದು ಠಾಣೆಗೆ ಬಂದು ಮನೆಯ ಮುಂದೆ ನಿಲ್ಲಿಸಿದ್ದ ತಮ ದ್ವಿ-ಚಕ್ರ ವಾಹನ ಕಳುವಾಗಿರುವ ಬಗ್ಗೆ ನೀಡಿದ್ದರು.

ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ ಎಚ್‌ಎಎಲ್‌ ಠಾಣೆ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ ಜೂನ್‌.18 ರಂದು ಆಂಧ್ರಪ್ರದೇಶದ ಅಣ್ಣಮಯಿ ಜಿಲ್ಲೆಯ ಮದನಪಲ್ಲಿಯ ಮುಖ್ಯ ರಸ್ತೆಯಲ್ಲಿ ಆರೋಪಿಯನ್ನುವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಆತನ ವಿಚಾರಣೆಗೊಳಪಡಿಸಿದಾಗ,ಬೆಂಗಳೂರು ನಗರ, ಹೊಸಕೋಟೆ ಮತ್ತು ವಿಜಯಪುರದಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್‌‍ ಅಭಿರಕ್ಷೆಗೆ ಪಡೆದುಕೊಂಡು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಯು ಕಳವು ಮಾಡಿದ ದ್ವಿ-ಚಕ್ರ ವಾಹನಗಳ ಪೈಕಿ 20 ದ್ವಿ-ಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಮದನಪಲ್ಲಿಯಲ್ಲಿರುವ ಸ್ನೇಹಿತರಿಬ್ಬರಿಗೆ ನೀಡಿರುವುದಾಗಿ ಹಾಗೂ 12 ದ್ವಿ-ಚಕ್ರ ವಾಹನಗಳನ್ನು ಮದನಪಲ್ಲಿ ಮುಖ್ಯ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದ.
ನಂತರ ಒಟ್ಟು 32 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 40 ಲಕ್ಷ ರೂ. ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಆರೋಪಿಯ ಬಂಧನದಿಂದ ಕೆ.ಆರ್‌.ಪುರಂ ಪೊಲೀಸ್‌‍ ಠಾಣೆಯ-7, ಆವಲಹಳ್ಳಿ ಪೊಲೀಸ್‌‍ ಠಾಣೆಯ-5, ಹೆಚ್‌.ಎ.ಎಲ್‌ ಪೊಲೀಸ್‌‍ ಠಾಣೆಯ-2 ,ಹೊಸಕೋಟೆ ಪೊಲೀಸ್‌‍ ಠಾಣೆಯ-1, ವಿಜಯಪುರ ಪೊಲೀಸ್‌‍ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 16 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 16 ದ್ವಿ-ಚಕ್ರ ವಾಹನಗಳ ಮಾಲೀಕರುಗಳ ಪತ್ತೆಕಾರ್ಯ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಉಪ ಪೊಲೀಸ್‌‍ ಆಯುಕ್ತರು ಡಾ:ಶಿವಕುಮಾರ್‌ ಗುಣಾರೇ, ಮಾರತ್‌ ಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಪ್ರಿಯದರ್ಶಿನಿ ಈಶ್ವರ್‌ಸಾಣೇಕೊಪ್ಪರವರ ಮಾರ್ಗದರ್ಶನ ದಲ್ಲಿ ಹೆಚ್‌.ಎ.ಎಲ್‌ ಪೊಲೀಸ್‌‍ ಠಾಣೆಯ ಪೊಲೀಸ್‌‍ ಇನ್ಸ್ ಪೆಕ್ಟರ್‌ ಅಜರುದ್ದೀನ್‌.ಎಂ.ಎಸ್‌‍ ಹಾಗೂ ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜ್ಯುವೆಲರಿ ಅಂಗಡಿಯ ಕೆಲಸಗಾರನ ಹೆದರಿಸಿ ಚಿನ್ನಾಭರಣ ಲೂಟಿ : ನಾಲ್ವರ ಸೆರೆ
ಜ್ಯುವೆಲರಿ ಅಂಗಡಿಯೊಂದರಲ್ಲಿ ಕೆಲಸಗಾರನೊಬ್ಬನೇ ಇರುವುದನ್ನು ಗಮನಿಸಿ ಹಾಡಹಗಲೇ ನುಗ್ಗಿ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರು ಸೇರಿ ಐವರನ್ನು ಕೆ.ಆರ್‌.ಪುರಂ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಮೌಲ್ಯದ 478 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮೇ 9ರಂದು ಮಧ್ಯಾಹ್ನ ಸೀಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಜ್ಯುವೆಲರಿ ಅಂಗಡಿಯ ಮಾಲೀಕರು ಊಟಕ್ಕೆ ಮನೆಗೆ ಹೋಗಿದ್ದಾಗ ಕೆಲಸಗಾರ ಮಾತ್ರ ಅಂಗಡಿಯಲ್ಲಿದ್ದನು. ಅಂದು ಸಂಜೆ 4 ಗಂಟೆ ಸಮಯದಲ್ಲಿ ಇಬ್ಬರು ದರೋಡೆಕೋರರು ಅಂಗಡಿಯೊಳಗೆ ನುಗ್ಗಿ ಕೆಲಸಗಾರನಿಗೆ ಚಾಕು ತೋರಿಸಿ ಬೆದರಿಸಿ 6 ಟ್ರೇಗಳಲ್ಲಿದ್ದ 600 ಗ್ರಾಂ ತೂಕದ 41 ಚಿನ್ನದ ಸರಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್‌.ಪುರ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ರಾಜಸ್ಥಾನದ ಜೋಧಪುರ ಜಿಲ್ಲೆಯ ಬೋರುಂಡ ಗ್ರಾಮದಲ್ಲಿ ಒಬ್ಬ ದರೋಡೆಕೋರ ಹಾಗೂ ಚಿನ್ನಾಭರಣ ಸ್ವೀಕರಿಸಿದ್ದ ಮತ್ತೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಇನ್ನಿಬ್ಬರು ಸಹಚರರೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿಯಂತೆ ಅನ್ನಪೂರ್ಣೇಶ್ವರಿ ನಗರದ ಮೂಡಲಪಾಳ್ಯದಲ್ಲಿ ಮತ್ತೊಬ್ಬ ದರೋಡೆಕೋರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮತ್ತಿಬ್ಬರ ಸಹಚರರ ಬಗ್ಗೆ ಮಾಹಿತಿ ನೀಡಿದ್ದಾರೆ.

ತನಿಖೆ ಮುಂದುವರೆಸಿ ಪೊಲೀಸರು, ಮೂವರು ದರೋಡೆಕೋರರ ವಾಸದ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿಯು ಚಿನ್ನದ ಕೆಲಸ ಮಾಡುವ ವ್ಯಕ್ತಿಗೆ ಮಾರಾಟ ಮಾಡಿದ್ದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ದರೋಡೆಕೋರರಿಂದ 50 ಲಕ್ಷ ರೂ. ಮೌಲ್ಯದ 478 ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಹಾಗು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಆರೋಪಿ ಸೆರೆ: 29 ಲಕ್ಷ ಮೌಲ್ಯದ ಆಭರಣ ಜಪ್ತಿ
ದ್ವಿಚಕ್ರ ವಾಹನ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿ 29.55 ಲಕ್ಷ ರೂ. ಮೌಲ್ಯದ 305 ಗ್ರಾಂ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಗೋವಿಂದರಾಜನಗರದ 2ನೇ ಮುಖ್ಯರಸ್ತೆಯಲ್ಲಿ ನಿವಾಸಿಯೊಬ್ಬರು ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಬೆಳಗಾಗುವಷ್ಟರಲ್ಲಿ ಕಳವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಪಟ್ಟೇಗಾರಪಾಳ್ಯದಲ್ಲಿ ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದುದ್ದನ್ನು ಗಮನಿಸಿ ತಡೆದು ವಿಚಾರಿಸಿದಾಗ, ಸರಿಯಾದ ಮಾಹಿತಿಯನ್ನು ನೀಡದೇ ಇದ್ದುದ್ದರಿಂದ, ದ್ವಿಚಕ್ರ ವಾಹನ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನು ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಹೇಳಿದ್ದಾನೆ. ಅಲ್ಲದೆ ಮನೆ ಕನ್ನ ಕಳವು ಸಹ ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯ ಮಾಹಿತಿಯ ಮೇರೆಗೆ ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ, 305 ಗ್ರಾಂ ಚಿನ್ನಾಭರಣವನ್ನು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 29.55 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಸುಬ್ರಹಣಿ ತಿಳಿಸಿದ್ದಾರೆ.

RELATED ARTICLES

Latest News