ಲಂಡನ್,ಜೂ.30-ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ತಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದಿದ್ದಾರೆ. ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ಮತ್ತೊಮೆ ಸ್ಪರ್ಧಿಸಲಿರುವ ಪ್ರಧಾನಿ ಸುನಕ್ ಅವರು ತಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಲಂಡನ್ ನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿ , ನಾನು ಒಬ್ಬ ಹಿಂದೂ. ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಲು ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ.
ದೇವಾಲಯವನ್ನು ವೀಕ್ಷಿಸಿದ ಬಳಿಕ ಅಲ್ಲಿನ ಸಮುದಾಯದ ಮುಖಂಡರೊಂದಿಗೆ ಮಾತನಾಡಿದ ರಿಷಿ ಸುನಕ್ ಹಲವು ವಿಚಾರಗಳ ಕುರಿತು ಚರ್ಚೆ ಮಾಡಿದರು.ಹಿಂದೂ ಧರ್ಮದ ಮೌಲ್ಯಗಳು ನನಗೆ ಮಾರ್ಗದರ್ಶಕವಾಗಿದೆ, ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳು ನನ್ನನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸಿದೆ ಎಂದ ರಿಷಿ, ನಾನು ನನ್ನ ಮಕ್ಕಳಿಗೂ ಅದನ್ನೇ ಕಲಿಸುತ್ತಿದ್ದೇನೆ ಎಂದರು.
ಇನ್ನು ಭಾರತದಲ್ಲಿ ಪೋಷಕರು ತಮ ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಬಯಸುತ್ತಾರೆ ಅಲ್ಲವೇ? ಎಂದು ಅಲ್ಲಿದ್ದವರೊಬ್ಬರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸುನಕ್ ನನ್ನ ಪೋಷಕರು ನಾನು ವೈದ್ಯ, ವಕೀಲ ಅಥವಾ ಅಕೌಂಟೆಂಟ್ ಆಗಿದ್ದರೆ ಹೆಚ್ಚಿನ ಸಂತೋಷ ಪಡುತ್ತಿದ್ದರೇನೋ ಎಂದು ತಮಾಷೆ ಮಾಡಿದರು. ಇದೇ ವೇಳೆ ಕ್ರಿಕೆಟ್ ಅಭಿಮಾನಿಯಾದ ಸುನಕ್ ಅವರು ಟಿ 20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಶುಭ ಕೋರಿದರು.