Friday, November 22, 2024
Homeಬೆಂಗಳೂರುಲಕ್ಷ್ಮಿ ಬ್ಯಾಂಕರ್ಸ್ ಜ್ಯುವೆಲರ್ಸ್ ಅಂಗಡಿ ದೋಚಲೆಂದೇ 2 ಬೈಕ್ ಕದ್ದಿದ್ದ ದರೋಡೆಕೋರರು

ಲಕ್ಷ್ಮಿ ಬ್ಯಾಂಕರ್ಸ್ ಜ್ಯುವೆಲರ್ಸ್ ಅಂಗಡಿ ದೋಚಲೆಂದೇ 2 ಬೈಕ್ ಕದ್ದಿದ್ದ ದರೋಡೆಕೋರರು

ಬೆಂಗಳೂರು, ಮಾ.19- ನಗರದ ಲಕ್ಷ್ಮಿ ಬ್ಯಾಂಕರ್ಸ್ ಅಂಡ್ ಜುವೆಲರ್ಸ್ ಅಂಗಡಿಯಲ್ಲಿ ದರೋಡೆ ನಡೆಸುವ ಸಲುವಾಗಿಯೇ ದರೋಡೆಕೋರರು ನಗರದಲ್ಲಿ ಎರಡು ಬೈಕ್ಗಳನ್ನು ಕಳ್ಳತನ ಮಾಡಿರುವುದು ಕೊಡಿಗೇಹಳ್ಳಿ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಚಾಲಾಕಿ ದರೋಡೆಕೋರರು ಕೃತ್ಯಕ್ಕೆ ಬಳಸಲು ಎಚ್ಎಸ್ಆರ್ ಲೇಔಟ್ನಲ್ಲಿ ಒಂದು ಬೈಕ್ ಮತ್ತು ವಿದ್ಯಾರಣ್ಯಪುರದಲ್ಲಿ ಮತ್ತೊಂದು ಬೈಕ್ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಬಂಧಿಸಿರುವ ಮೂವರು ದರೋಡೆಕೋರ ರಿಂದ 3 ಪಿಸ್ತೂಲುಗಳು, 12 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕೃತ್ಯ ನಡೆದ ಅಂಗಡಿ ಮುಂಭಾಗದಲ್ಲೇ ಎಸೆದು ಹೋಗಿದ್ದ 1 ಪಿಸ್ತೂಲನ್ನು ವಶಕ್ಕೆ ಪಡೆದಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ 4 ಪಿಸ್ತೂಲು ಮತ್ತು 2 ಮೊಬೈಲ್ ವಶಪಡಿಸಿಕೊಂಡಂತಾಗಿದೆ.

ದೂರು ದಾಖಲಾದ ಕೇವಲ 24 ಗಂಟೆಯಲ್ಲೇ ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿ ನಂತರ 48 ಗಂಟೆಗಳೊಳಗೆ ಬಂಧಿಸುವಲ್ಲಿ ವಿಶೇಷ ತಂಡ ಯಶಸ್ವಿಯಾಗಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿ ಬ್ಯಾಂಕರ್ಸ್ ಅಂಡ್ ಜ್ಯುವೆಲರಿ ಅಂಗಡಿ ಬಳಿ ಮಾರ್ಚ್ 14 ರಂದು ಬೆಳಿಗ್ಗೆ 11.20ರ ಸುಮಾರಿನಲ್ಲಿ ಹೋದ ನಾಲ್ವರು ದರೋಡೆಕೋರರ ಪೈಕಿ ಮೂವರು ಅಂಗಡಿ ಒಳಗೆ ಹೋಗಿ ಮಾಲೀಕ ಅಪ್ಪುರಾಮ್ ಹಾಗೂ ಸಂಬಂಧಿಕ ಅನಂತರಾಮ್ಗೆ ಪಿಸ್ತೂಲು ತೋರಿಸಿ ಬೆದರಿಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದಾಗ ಇಬ್ಬರೂ ಪ್ರತಿರೋಧ ವ್ಯಕ್ತಪಡಿಸಿ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಪಿಸ್ತೂಲಿನಿಂದ ಇಬ್ಬರ ಮೇಲೂ ಗುಂಡು ಹಾರಿಸಿ ಪರಾರಿಯಾಗಿದ್ದರು.

ಒಂದು ಗುಂಡು ಮಾಲೀಕನ ಹೊಟ್ಟೆ ಭಾಗಕ್ಕೆ ಮತ್ತೊಂದು ಗುಂಡು ಮಾಲೀಕನ ಅಕ್ಕನ ಮಗನ ತೊಡೆಯ ಭಾಗಕ್ಕೆ ತಗುಲಿ ಗಾಯಗೊಂಡಿದ್ದು , ಸದ್ಯ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಡಹಗಲೇ ನಗರದಲ್ಲಿ ಗುಂಡು ಹಾರಿಸಿ ದರೋಡೆಗೆ ವಿಫಲಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕೆ 3 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಈ ತಂಡಗಳು ಕಾರ್ಯಾಚರಣೆ ಕೈಗೊಂಡು ದರೋಡೆಕೋರರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರ ರೈಲ್ವೆ ನಿಲ್ದಾಣದಿಂದ ಮಧ್ಯಪ್ರದೇಶ ಕಡೆಗೆ ರೈಲಿನಲ್ಲಿ ಹೋಗಿರುವ ಬಗ್ಗೆ ಗೊತ್ತಾಗಿದೆ. ಒಂದು ತಂಡ ಮಧ್ಯಪ್ರದೇಶದ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಮೂವರು ದರೋಡೆಕೋರರನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಮತ್ತೊಬ್ಬ ಆರೋಪಿ ಗುಂಡೇಟಿನಿಂದ ಗಾಯಗೊಂಡಿದ್ದರಿಂದ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರಿದಿದೆ. ಈ ದರೋಡೆಕೋರರು ಮಧ್ಯಪ್ರದೇಶ ರಾಜ್ಯದ ಮೊರೋನೋ ಜಿಲ್ಲೆಯವರು. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 13 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿಗಳ ಪೈಕಿ ಪ್ರಮುಖ ಆರೋಪಿ ವಿರುದ್ಧ ಈ ಹಿಂದೆ 15ಕ್ಕೂ ಹೆಚ್ಚು ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿರುತ್ತದೆ.

RELATED ARTICLES

Latest News