ನವದೆಹಲಿ, ಜೂ.28- ಭಾರೀ ಮಳೆಯಿಂದಾಗಿ ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿಯ ಒಂದು ಭಾಗ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಇಂದು ಮಧ್ಯಾಹ್ನ 2 ಗಂಟೆಯವರೆಗೆ ವಿಮಾನ ನಿರ್ಗಮನವನ್ನು ಸ್ಥಗಿತಗೊಳಿಸಲಾಗಿತ್ತು.
ಭಾರೀ ಮಳೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರ ಹಳೆಯ ನಿರ್ಗಮನ ಬಳಿ ಮೇಲಾವರಣದ ಒಂದು ಭಾಗವು ಮುಂಜಾನೆ 5 ಗಂಟೆ ಸುಮಾರಿಗೆ ಕುಸಿದಿದೆ. ಇದರಿಂದ ಹಲವು ಪ್ರಯಾಣಿಕರು ಗಾಯಗೊಂಡಿದ್ದು ಕೂಡಲೆ ತುರ್ತು ಪಡೆ ಸಿಬ್ಬಂದಿ ಅಗತ್ಯವೈದ್ಯಕೀಯ ನೆರವು ನೀಡಿದ್ದಾರೆ ಎಂದು ದೆಹಲಿ ಅಂತರರಾಷ್ಟ್ರೀಯ ಏರ್‌ಪೋರ್ಟ್ ವಕ್ತಾರರು ತಿಳಿಸಿದ್ದಾರೆ.
ಕೇವಲ ದೇಶೀಯ ವಿಮಾನಗಳ ಕಾರ್ಯಾಚರಣೆಗಳನ್ನು ಹೊಂದಿರುವ ಟರ್ಮಿನಲ್1 ನಲ್ಲಿ ವಿಮಾನ ನಿರ್ಗಮನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಮತ್ತು ವಿಮಾನ ನಿಲ್ದಾಣದ ನಿರ್ವಾಹಕರು ಟಿ.1 ನಿಂದ ಟಿ.2 ಮತ್ತು ಟಿ.3 ಗೆ ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇಲ್ಛಾವಣಿ ಕುಸಿತದ ಘಟನೆಯ ನಂತರ ಬೆಳಿಗ್ಗೆ 7:30 ರ ಸುಮಾರಿಗೆ ವಿಮಾನ ನಿರ್ಗಮನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ವಿಮಾನಗಳ ಆಗಮನದ ಮೇಲೆ ಪರಿಣಾಮ ಬೀರಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯ ಪರಿಣಾಮವಾಗಿ, ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು .ಈ ಅಡ್ಡಿಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ಶೀಘ್ರ ಪರಿಸ್ಥಿತಿ ಸರಿಹೋಗಲಿದೆ ಎಂದು ಹೇಳಿದರು.
ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಅವರು ಪರಿಸ್ಥಿತಿಯನ್ನು ಸರಿಪಡಿಸಲಾಗುತ್ತಿದೆ ,ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಇಂಡಿಗೋ ವಿಮಾನಯಾನ ವಕ್ತಾರರು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.ಗ್ರಾಹಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಬಗ್ಗೆ ಮಾಹಿತಿ ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ ಎಂದಿದ್ದಾರೆ.