Thursday, July 24, 2025
Homeರಾಜ್ಯರೌಡಿ ಬಿಕ್ಲು ಶಿವ ಕೊಲೆ ಪ್ರಕರಣ ಪ್ರಮುಖ ಆರೋಪಿ ದುಬೈಗೆ ಪರಾರಿ

ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ ಪ್ರಮುಖ ಆರೋಪಿ ದುಬೈಗೆ ಪರಾರಿ

Rowdy Biklu Shiva murder case main accused flees to Dubai

ಬೆಂಗಳೂರು, ಜು.23- ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಸಂಕಷ್ಟ ತಂದಿರುವ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ದುಬೈಗೆ ಪಲಾಯನ ಮಾಡಿದ್ದಾನೆ.
ಶಿವಪ್ರಕಾಶ್‌ ಅಲಿಯಾಸ್‌‍ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದೇ ಶಂಕಿಸಲಾಗಿರುವ ಜಗದೀಶ್‌ ಅಲಿಯಾಸ್‌‍ ಜಗ್ಗ ಅಂದು ಶಿವನ ಕೊಲೆ ನಡೆದ ನಂತರ ಯಾರಿಗೂ ತಿಳಿಯದಂತೆ ದುಬೈಗೆ ಪರಾರಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಹಿಂದೆ ಫೇಸ್‌‍ ಬುಕ್‌ ಲೈವ್‌ನಲಿ ಜಗದೀಶ್‌ಗೆ ಬಿಕ್ಲು ಶಿವ ನಿಂದಿಸುತ್ತಿದ್ದ ಹೀಗಾಗಿ ಇಬ್ಬರ ನಡುವೆ ವೈಷಮ್ಯ ಮನೆ ಮಾಡಿತ್ತು. ಯಾವುದೋ ಒಂದು ಸಂದರ್ಭದಲ್ಲಿ ಇಬ್ಬರು ಖಾಮುಖಿಯಾಗಿದ್ದಾಗ ಇಬ್ಬರ ನಡುವೆ ಜಗಳವಾಗಿತ್ತು. ಜಗಳದ ಸಂದರ್ಭದಲ್ಲಿ ಬಿಕ್ಲು ಶಿವ ನೀನು ನನ್ನನ್ನು ಏನು ಮಾಡೋಕೆ ಆಗಲ್ಲ ಎಂದು ಸವಾಲು ಹಾಕಿದ್ದ ಆಗ ಜಗ್ಗ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದ.

ಈ ಘಟನೆಯ ನಂತರ ರಿಯಲ್‌ ಎಸ್ಟೇಟ್‌ ವಿಚಾರದಲ್ಲೂ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಬಿಕ್ಲು ಶಿವನ ಕೊಲೆಗೆ ಜಗ್ಗ ಸುಫಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.ಕನ್ನಡದ ಖ್ಯಾತ ಚಿತ್ರನಟಿಯೊಬ್ಬರ ಸಂಪರ್ಕದಲ್ಲಿದ್ದ ಜಗ್ಗ ಸೆಲೆಬ್ರಿಟಿಯಾಗಿಯೂ ಗುರುತಿಸಿಕೊಂಡಿದ್ದ. ಕೊಲೆ ಪ್ರಕರಣದ ನಂತರ ಜಗ್ಗನ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ಗನ್‌ ಲೈಸೆನ್ಸ್ ಕೂಡ ಪತ್ತೆಯಾಗಿತ್ತು. ಪೊಲೀಸರು ನನ್ನ ಬೆನ್ನು ಬಿದ್ದಿದ್ದಾರೆ ಎಂಬ ಸುಳಿವರಿತ ಆತ ಯಾರ ಕೈಗೂ ಸಿಗದೆ ತಲೆ ಮರೆಸಿಕೊಂಡಿದ್ದಾನೆ.

ಆತನ ಬಂಧನಕ್ಕಾಗಿ ನಗರ ಪೊಲೀಸರು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳದಲ್ಲಿ ಜಾಲಾಡಿದ್ದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಜಗ್ಗನ ಟ್ರಾವಲ್‌ ಹಿಸ್ಟರಿ ಜಾಡು ಹಿಡಿದ ಪೊಲೀಸರಿಗೆ ಅತ ಚೆನ್ನೈ ಮಾರ್ಗವಾಗಿ ದೂರದ ದುಬೈಗೆ ಪರಾರಿಯಾಗಿರುವುದು ಪತ್ತೆಯಾಗಿದೆ.

ಹೀಗಾಗಿ ದುಬೈನಲ್ಲಿ ತಲೆಮರೆಸಿಕೊಂಡಿರುವ ಜಗ್ಗನ ವಿರುದ್ಧ ಪೊಲೀಸರು ಲುಕ್‌ ಔಟ್‌ ನೋಟೀಸ್‌‍ ಹೊರಡಿಸಲಿದ್ದು, ಆತನನ್ನು ಬಂಧಿಸಿ ನಗರಕ್ಕೆ ಕರೆತರುವ ಪ್ರಯತ್ನ ಮುಂದುವರೆಸಿದ್ದಾರೆ.

11 ಆರೋಪಿಗಳ ಬಂಧನ;
ಬಿಕ್ಲು ಶಿವನ ವಿರುದ್ಧ ಹಲ್ಲು ಮಸೆಯುತ್ತಿದ್ದ ಜಗ್ಗ ಆತನ ಕೊಲೆಗೆ ಮಾಲೂರು ಮೂಲದ ಹಂತಕರಿಗೆ ಒಂದೂವರೆ ಲಕ್ಷ ರೂ.ಗಳ ಸುಫಾರಿ ನೀಡಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ಯಾವಾಗ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜ್‌ ಅವರ ಹೆಸರು ಥಳುಕು ಹಾಕಿಕೊಳ್ಳುತ್ತಿದ್ದಂತೆ ಆಕ್ಟಿವ್‌ ಆದ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಮಾಲೂರಿನ ಐದು ಮಂದಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

RELATED ARTICLES

Latest News