Thursday, June 20, 2024
Homeಜಿಲ್ಲಾ ಸುದ್ದಿಗಳುಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯ ಬರ್ಬರ ಹತ್ಯೆ

ಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯ ಬರ್ಬರ ಹತ್ಯೆ

ಹಾಸನ, ಜೂ. 5- ಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೇಮಾವತಿ ನಗರ ಬಡಾವಣೆಯಲ್ಲಿ ನಡೆದಿದೆ.

ಕುಡಿಯಲು ನೀರು ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ.

ವಾಯುವಿಹಾರ ಮಾಡುತ್ತಿದ್ದ ಜನರು ಶಾಲೆಗೆ ಹೋಗಲು ಬಸ್‌‍ಗಾಗಿ ಕಾಯುತ್ತಿದ್ದ ಮಕ್ಕಳು ಹಾಗೂ ಅಂಗಡಿಗಳಲ್ಲಿ ದಿನನಿತ್ಯ ವಸ್ತುಗಳನ್ನು ಖರೀದಿ ಮಾಡಲು ಜನರು ಬರುತ್ತಿದ್ದಾಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ಅದೇ ಸಮಯದಲ್ಲಿ ಶಾಲಾ ಬಸ್ಸೊಂದು ತೆರಳಿದ್ದು, ಅದರೊಳಗಿದ್ದ ಮಕ್ಕಳು ರಕ್ತವನ್ನು ಕಂಡು ಆಘಾತಕ್ಕೊಳಗಾಗಿದ್ದು, ಕೆಲ ಮಕ್ಕಳು ಜೋರಾಗಿ ಬಸ್‌‍ನಲ್ಲೇ ಚೀರಿದ್ದಾರೆ.

ಈ ಹಿಂದೆ ಚೈಲ್ಡ್ ರವಿ ಸಹ್ಯಾದ್ರಿ ಚಿತ್ರಮಂದಿರದ ಎದುರು ನಡೆದಿದ್ದ ಸ್ಲಂ ಮಂಜನ ಹತ್ಯೆ ಸೇರಿದಂತೆ ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಯಾರು ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಪೆನ್ಷನ್‌ ಮೊಹಲ್ಲ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಶಾಸಕರ ನಿವಾಸದ ಕೂಗಳತೆ ದೂರದಲ್ಲೇ ಬೆಳ್ಳಂಬೆಳಿಗ್ಗೆ ಹತ್ಯೆ ನಡೆದಿರುವುದು ಇಡೀ ಬಡಾವಣೆಯ ಜನರನ್ನು ಬೆಚ್ಚಿಬೀಳಿಸಿದೆ.

RELATED ARTICLES

Latest News