ಮೈಸೂರು,ಸೆ.18– ಮಹಿಳೆ ಬಗ್ಗೆ ವಾಟ್ಸಾಪ್ನಲ್ಲಿ ಅಸಭ್ಯ ಮೆಸೇಜ್ ಗಳನ್ನು ಹಾಕಿ ಗೌರವಕ್ಕೆ ಮಸಿ ಬಳಿದ ಆರೋಪದ ಮೇಲೆ ಕೃಷ್ಣರಾಜ ಠಾಣೆ ಪೊಲೀಸರು ರೌಡಿಶೀಟರ್ ಓರ್ವನನ್ನು ಬಂಧಿಸಿದ್ದಾರೆ.ರಮೇಶ್ ಕುಮಾರ್ ಮಾಲಿ ಬಂಧನಕ್ಕೊಳಗಾದ ರೌಡಿ ಶೀಟರ್.
ರಾಮ್ ಮಾಲಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕೃಷ್ಣರಾಜ ಠಾಣೆ ಪೊಲೀಸರು ರಮೇಶ್ ಕುಮಾರ್ ಮಾಲಿಯನ್ನು ಬಂಧಿಸಿದ್ದಾರೆ.ಸಮುದಾಯದ ವಾಟ್ಸಾಪ್ ಗ್ರೂಪ್ನಲ್ಲಿ ವಿರಾಮ್ ರಾಮ್ ಮಾಲಿ ಹಾಗೂ ಪತ್ನಿ ಸದಸ್ಯರಾಗಿದ್ದರು. ಕೆಲವು ದಿನಗಳ ನಂತರ ವಿರಾಮ್ ರಾಮ್ ಮಾಲಿ ಗ್ರೂಪ್ನಿಂದ ಎಕ್ಸಿಟ್ ಆದರು. ಅಡ್ಮಿನ್ ಆಗಿರುವ ರಮೇಶ್ ಕುಮಾರ್ ಮಾಲಿ ಆಗಾಗ ವಿರಾಮ್ ರಾಮ್ ಮಾಲಿ ಪತ್ನಿಯ ಬಗ್ಗೆ ಕೆಟ್ಟದಾಗಿ ಮೆಸೇಜ್ ಹಾಕಿದ್ದಾನೆ.
ಈ ವಿಚಾರ ಪರಿಚಯಸ್ಥರಿಂದ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ರಮೇಶ್ ಕುಮಾರ್ ಮಾಲಿ ಮತ್ತೆ ಮಹಿಳೆಯ ಬಗ್ಗೆ ಅಸಭ್ಯವಾಗಿ ಮಾತನಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಕುರಿತಂತೆ ವಿರಾಮ್ ರಾಮ್ ಮಾಲಿ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮೊದಲೇ ರೌಡಿ ಶೀಟರ್ ಆಗಿರುವ ರಮೇಶ್ ಕುಮಾರ್ ಮಾಲಿಯನ್ನು ಕೃಷ್ಣರಾಜ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.