Monday, June 17, 2024
Homeರಾಜ್ಯಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರಲ್ಲ : ಬಿಎಸ್‌ವೈ ವಿರುದ್ಧ ಡಿವಿಎಸ್ ಪರೋಕ್ಷ ವಾಗ್ದಾಳಿ

ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರಲ್ಲ : ಬಿಎಸ್‌ವೈ ವಿರುದ್ಧ ಡಿವಿಎಸ್ ಪರೋಕ್ಷ ವಾಗ್ದಾಳಿ

ಬೆಂಗಳೂರು, ಮಾ.21-ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಪಕ್ಷದಲ್ಲಿದ್ದುಕೊಂಡೇ ಶುದ್ದೀಕರಣ ಕೆಲಸ ಮಾಡುವುದಾಗಿ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಇದೀಗ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಖುದ್ದು ಡಿವಿಎಸ್, ನನಗೆ ಕಾಂಗ್ರೆಸ್ ಸೇರುವಂತೆ ಆ ಪಕ್ಷದ ಪ್ರಮುಖರು ಆಹ್ವಾನ ನೀಡಿದ್ದು ನಿಜ. ಆದರೆ ನಾನು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಈ ಬಾರಿ ಟಿಕೆಟ್ ಕೈ ತಪ್ಪಿರುವುದಕ್ಕೆ ನಿಜವಾಗಿಯೂ ಬೇಸರವಾಗಿದೆ. ಟಿಕೆಟ್ ಕೈ ತಪ್ಪಿಸಿದವರು ಯಾರು ಎಂಬುದು ನನಗೂ ಗೊತ್ತು. ನಿಮಗೂ ಗೊತ್ತು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಟಿಕೆಟ್ ಕೈ ತಪ್ಪಿದಾಗ ಮನಸ್ಸಿಗೆ ಬೇಸರವಾಗಿದ್ದು ನಿಜ. ಸೀಟ್ ಹಂಚಿಕೆ ಬಗ್ಗೆ ಗೊಂದಲ ಇದ್ದಾಗ, ನಾನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬದಲಿ ಹೆಸರು ಬಂದಾಗ ಕುತೂಹಲ ಹೆಚ್ಚಾಗಿತ್ತು. ನಾನು ಚುನಾವಣೆ ಯಿಂದ ದೂರ ಸರಿದಾಗ ಎಲ್ಲರೂ ನನ್ನನ್ನು ಮನವೊಲಿಸಿದರು ಎಂದು ಹೇಳಿದರು.

ನನ್ನ ಮುಂದಿನ ನಡಿಗೆ ಕರ್ನಾಟಕದ ಬಿಜೆಪಿ ಶುದ್ಧೀಕರಣವಾಗಬೇಕು. ನನಗೆ ಟಿಕೆಟ್ ಕೈತಪ್ಪಿಸಿದವರು ಮುಂದಿನ ದಿನಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಲವರು ಮಾಜಿ ಸಚಿವರು ಪಶ್ಚಾತ್ತಾಪ ಪಡುತ್ತಾರೆ. ಸಹಿಸಿಕೊಳ್ಳುವವನಿಗೆ ತಾಳ್ಮೆ ಇದ್ದರೆ ದುಃಖ ಕೊಟ್ಟವನು ಸತ್ತಂತೆ ಎಂದು ಯಾರ ಹೆಸರನ್ನು ಹೇಳದೆ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.

ಕಾಂಗ್ರೆಸ್ನವರು ನನಗೆ ಯಾವ ಕ್ಷೇತ್ರ ಬೇಕಾದರೂ ಟಿಕೆಟ್ ಕೊಡುತ್ತೇನೆ ಅಂದರು. ಗೆಲ್ಲಿಸಿಕೊಂಡೇ ಬರುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ನಾನು ಪಕ್ಷಕ್ಕೆ ಕೊಡಬೇಕಾದ್ದು ಇದೆ. ಸದಾನಂದಗೌಡ ಕೊಟ್ಟ ಕುದುರೆ ಏರಲಾದವನು ಧೀರನು ಅಲ್ಲ ಶೂರನೂ ಅಲ್ಲ ಅಂತ ವಿಶ್ಲೇಷಣೆ ಆಯಿತು. ನಾನು ನನಗೆ ಕೊಟ್ಟ ಎಲ್ಲಾ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೀನಿ ಎಂದು ಸಮರ್ಥಿಸಿಕೊಂಡರು.

ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಜನಪರ ಮತ್ತು ಜನ ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಶೇ.40 ಕಮಿಷನ್ ಆರೋಪ, ಸ್ವಜನಪಕ್ಷಪಾತ ಆರೋಪ ಬರಬಾರದು. ಮೋದಿಯವರು ಹೇಳಿದಂತೆ ಜಾತಿವಾದ, ಕುಟುಂಬವಾದ ಹಾಗೂ ಭ್ರಷ್ಟಾಚಾರ ಇರಬಾರದು. ಹೀಗಾಗಿ, ಪಾರ್ಟಿಯ ಶುದ್ದಿಕರಣಕ್ಕೆ ವೇಗ ಕೊಡುತ್ತೇನೆ ಎಂದರು.

ಸದಾನಂದಗೌಡ ಏನು ಮಾಡಬಹುದು ಎಂಬ ಪ್ರಶ್ನೆ ಹುಟ್ಟಬಹುದು. ಇದು ಸಿಂಗಲ್ ಮ್ಯಾನ್ ಆರ್ಮಿ ಅಂದುಕೊಳ್ಳಬಹುದು. ಪೂಜೆ ಮಾಡುವಾಗ ಶುದ್ಧೀಕರಣ ಮಾಡಲು ಹಲವರು ಇರಬಹುದು. ಆದರೆ ಪುರೋಹಿತರು ಒಬ್ಬರೇ ಇರುತ್ತಾರೆ. ಹಾಗೇ ನಾನು. ಸಮಾನ ಮನಸ್ಕರೊಂದಿಗೆ ಶುದ್ಧೀಕರಣದತ್ತ ಗಮನಹರಿಸುತ್ತೇವೆ ಎಂದು ಹೇಳಿದರು.

ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಂದು ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅವರಿಗೆ ಪಾರ್ಟಿ ಬೆಲೆ ಕೊಡಲಿಲ್ಲ. ರಾಜ್ಯದಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲಿಲ್ಲ . ಸಿ.ಟಿ.ರವಿಯನ್ನು ಸೈಡ್ಲೈನ್ ಮಾಡುವ ವ್ಯವಸ್ಥೆ ನಡೆಯುತ್ತಿದೆ. 142 ಜನರು ಸದಾನಂದಗೌಡರೇ ಸ್ಪರ್ಧೆ ಮಾಡಬೇಕು ಎಂದು ಹೇಳಿದರು. ಆದರೆ ದೆಹಲಿಯಲ್ಲಿ ನನ್ನ ಪರ ನಿಲ್ಲದವರು ನಾಯಕರೇ ಅಲ್ಲ ಎಂದು ಕಿಡಿಕಾರಿದರು.

ಮಾಧ್ಯಮ ವಿಶ್ಲೇಷಕರು ಕೂಡ, ನಾನು ಕೊಟ್ಟ ಕುದುರೆ ಏರದವನು ಎಂದರು. ನಾನು ಕೇಂದ್ರಮಂತ್ರಿಯಾಗಿ ಫೇಲ್ ಅಂದರು. ಸಿಎಂ ಆಗಿದ್ದಾಗ ಸಕಾಲ ಯೋಜನೆ ತಂದೆ. ಕೇಂದ್ರ ಸಚಿವನಾಗಿದ್ದಾಗ ರೆಮಿಡಿಸಿವರ್ ಮೆಡಿಸಿನ್ನ್ನು ರಾಜ್ಯಕ್ಕೆ ನೀಡಿದೆ. ಮಾಧ್ಯಮಗಳ ಚರ್ಚೆಗೆ ನಾನು ಕುಗ್ಗುವುದು ಇಲ್ಲ. ಹಿಗ್ಗುವುದು ಇಲ್ಲ ಎಂದರು.

ನಮ್ಮ ರಾಜ್ಯದಲ್ಲಿ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷದಲ್ಲಿ ತಾನು ತನ್ನ ಮಕ್ಕಳು, ಕುಟುಂಬ, ತನ್ನ ಚೇಳಾಗಳಿಗೆ, ತನ್ನ ಜಾತಿಯವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಮೋದಿಯವರ ಜನಪರ ಪಕ್ಷವಾಗಬೇಕು. ಕುಟುಂಬ ರಾಜಕಾರಣದಿಂದ ಹೊರಬರಬೇಕು ಎಂದು ಪರೋಕ್ಷವಾಗಿ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ದುಃಖವಾಗಿದೆ ಬೇಸರವಾಗಿದೆ ನೋವಾಗಿದೆ ಅನ್ನೋದು ಹೌದು. ಸಹಿಸಿಕೊಳ್ಳುವವನಿಗೆ ತಾಳ್ಮೆ ಇದ್ದರೆ ನೋವು ಕೊಡುವವರು ಇದ್ದು ಸತ್ತಂತೆ. ನನ್ನ ವಿರೋಗಳು ಪಕ್ಷ ನನಗೆ ಎಲ್ಲಾ ಕೊಟ್ಟಿದೆ ನಾನು ಪಕ್ಷಕ್ಕೆ ಏನು ಕೊಡ್ತಾರೆ. ಹೀಗೆ ಹಲವು ಟೀಕೆ ಟಿಪ್ಪಣಿಗಳು ಚರ್ಚೆ ಆದ್ವು ಅದ್ರೆ ನಾನು ಅದಕ್ಕೆ ಕುಗ್ಗುವುದಿಲ್ಲ ಎಂದರು.

RELATED ARTICLES

Latest News