ಸಂಭಾಲ್,ನ.25- ಉತ್ತರ ಪ್ರದೇಶದ ಸಂಭಾಲ್ನಲ್ಲಿ ಮಸೀದಿ ಸಮೀಕ್ಷೆ ಕುರಿತು ಭಾನುವಾರ ಭುಗಿಲೆದ್ದಿರುವ ಹಿಂಸಾಚಾರ ಆತಂಕ ಹೆಚ್ಚಿಸಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಹತ್ಯೆಯಾಗಿದ್ದ, 20 ಪೊಲೀಸರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯು ಸ್ಥಳೀಯರು ಮತ್ತು ಪೊಲೀಸರ ನಡುವೆ ಭಾನುವಾರ ಬೆಳಿಗ್ಗೆ ಸಂಭಾಲ್ನಲ್ಲಿ ಘರ್ಷಣೆ ಕಾರಣವಾಗಿತ್ತು. ಇನ್ನು ಘರ್ಷಣೆಯಲ್ಲಿ 20ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಪ್ರತಿಕ್ರಿಯಿಸಿದ್ದು, ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ಎಸೆದರು. ಇನ್ನು ಗುಂಪು ಚದುರಿಸಲು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ನಡೆಸಿದ್ದರು. ಈ ಗಲಾಟೆಯಲ್ಲಿ ಸುಮಾರು 20 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ತಲೆಗೆ ಪೆಟ್ಟಾಗಿರುವ ಕಾನ್‌್ಸಟೇಬಲ್ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ 21 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಮೊಘಲರು ದೇವಸ್ಥಾನವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಿದ್ದರು ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಈ ಜಾಗದಲ್ಲಿ ನಿಜಕ್ಕೂ ದೇವಸ್ಥಾನ ಇತ್ತೇ ಎಂಬ ಪುರಾವೆಗಳನ್ನು ಸಂಗ್ರಹಿಸುವ ಸಲುವಾಗಿ ಸಮೀಕ್ಷೆ ನಡೆಸುವಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ ಅಧಿಕಾರಿಗಳ ತಂಡ ಭಾನುವಾರ ಸಂಭಾಲ್ನ ಶಾಹಿ ಜಮಾ ಮಸೀದಿಗೆ ಸರ್ವೆಗೆ ತೆರಳಿದಾಗ ಗದ್ದಲ ನಡೆದಿದ್ದು, ಅದು ಹಿಂಸಾಚಾರಕ್ಕೆ ತಿರುಗಿತ್ತು.
ಸಂಭಾಲ್ ತಹಸಿಲ್ನಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಜಿಲ್ಲಾಡಳಿತವು 12 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ನ.25 ರಂದು ರಜೆ ಘೋಷಿಸಿದೆ. ಅಧಿಕಾರಿಗಳ ಆದೇಶವಿಲ್ಲದೆ ಯಾವುದೇ ಹೊರಗಿನವರು, ಸಾಮಾಜಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಪ್ರತಿನಿಧಿಗಳು ಸಂಭಾಲ್ ಪ್ರವೇಶಿಸುವುದನ್ನು ನಿಷೇಧಿಸಿ ಅಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿ :
ಕುಪಿತ ಪ್ರತಿಭಟನಾಕಾರರು ಅನೇಕ ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಗುಂಪನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ನಡೆಸಿದರು. ಸಂಭಾಲ್ನಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗಟ್ಟುವುದನ್ನು ನಿರ್ಬಂಧಿಸಲಾಗಿದೆ. ಕಲ್ಲು, ಸೋಡಾ ಬಾಟಲಿ ಅಥವಾ ಯಾವುದೇ ಉರಿಯುವ ಹಾಗೂ ಸ್ಫೋಟಕ ವಸ್ತುಗಳ ಖರೀದಿ ಹಾಗೂ ಸಂಗ್ರಹವನ್ನು ಸಹ ಜಿಲ್ಲಾಡಳಿತ ನಿಷೇಧಿಸಿದೆ. ನ.30ರವರೆಗೂ ಈ ಪ್ರದೇಶಕ್ಕೆ ಅನುಮತಿ ಇಲ್ಲದೆ ಹೊರಗಿನವರು, ಸಾಮಾಜಿಕ ಸಂಘಟನೆ ಅಥವಾ ಸಾರ್ವಜನಿಕ ಪ್ರತಿನಿಧಿ ಪ್ರವೇಶಿಸುವುದನ್ನು ಕೂಡ ನಿಷೇಧಿಸಲಾಗಿದೆ.
ಇಬ್ಬರು ಮಹಿಳೆಯರು ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಈ ಹಿಂಸಾಚಾರದ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರಲ್ಲಿ ಇಬ್ಬರ ಸಾವಿಗೆ ನಾಡ ಪಿಸ್ತೂಲಿನಿಂದ ಹಾರಿದ ಗುಂಡುಗಳು ಕಾರಣ ಎನ್ನುವುದು ಖಚಿತವಾಗಿದೆ. ಉಳಿದ ಇಬ್ಬರ ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ತಿಳಿಸಿದ್ದಾರೆ.ಈ ಹಿಂಸಾಚಾರಗಳ ನಡುವೆಯೂ ಸಮೀಕ್ಷೆಯ ಸರ್ವೆ ಕಾರ್ಯವನ್ನು ಅಧಿಕಾರಿಗಳು ನಡೆಸಿದ್ದು, ನ.29ರಂದು ವರದಿ ಸಲ್ಲಿಸಲಿದೆ.
ಏನಿದು ಘಟನೆ? :
ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಶಾಹಿ ಜಾಮಾ ಮಸೀದಿಯು ಈ ಮೊದಲು ದೇವಾಲಯವಾಗಿತ್ತೇ ಎಂದು ಪರಿಶೀಲನೆ ನಡೆಸಲು ಹೋದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮೊಘಲರು ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಲಾಗಿತ್ತು. ಇದು ಮೊದಲು ಹರಿಹರ ದೇವಾಲಯವಾಗಿತ್ತು ಎಂಬ ವಕೀಲ ವಿಷ್ಣು ಶಂಕರ್ ಜೈನ್ ಅವರ ಅರ್ಜಿಯ ಮೇರೆಗೆ ನ್ಯಾಯಾಲಯವು ಸಮೀಕ್ಷೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ (ನ. 24) ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲು ಹೋಗಿತ್ತು. ಆದರೆ ಏಕಾಏಕಿ ಸ್ಥಳೀಯರು ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದಾರೆ.
ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಪ್ರತಿಭಟನೆ ಆರಂಭಿಸಿದರು. ಜನರ ಗುಂಪು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಹಲವು ಅಧಿಕಾರಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.