ನವದೆಹಲಿ, ಜೂ.3 (ಪಿಟಿಐ)- ಮತಗಟ್ಟೆಯಲ್ಲಿ ಇವಿಎಂ ಒಡೆದು ಹಾಕಿದ ಆರೋಪದ ಮೇಲೆ ವೈಎಸ್‌ಆರ್ ಕಾಂಗ್ರೆಸ್ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿಗೆ ಜೂನ್ 4ರಂದು ಮಾಚರ್ಲಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠವು ಮೇ 13 ರ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯ ವೀಡಿಯೊವನ್ನು ನೋಡಿದೆ ಮತ್ತು ರೆಡ್ಡಿಗೆ ನೀಡಲಾದ ನಿರೀಕ್ಷಣಾ ಜಾಮೀನು ನ್ಯಾಯ ವ್ಯವಸ್ಥೆಯ ಸಂಪೂರ್ಣ ಅಪಹಾಸ್ಯ ಎಂದು ಹೇಳಿದೆ.
ಜೂನ್ 4 ರಂದು ಮಾಚರ್ಲಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸದಂತೆ ಮತ್ತುಅದರ ಸಮೀಪದಲ್ಲಿ ಇರದಂತೆ ಪೀಠವು ರೆಡ್ಡಿಗೆ ಕಟ್ಟುನಿಟ್ಟಿಗಿ ಸೂಚಿಸಿದೆ.ಮೇ 28 ರಂದು ರೆಡ್ಡಿ ಅವರಿಗೆ ನೀಡಲಾದ ಮಧ್ಯಂತರ ರಕ್ಷಣೆಯಿಂದ ಪ್ರಭಾವಿತರಾಗದೆ ಜೂನ್ 6 ರಂದು ವಿಚಾರಣೆಗೆ ಪಟ್ಟಿ ಮಾಡಲಾದ ರೆಡ್ಡಿ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಯನ್ನು ನಿರ್ಧರಿಸಲು ಆಂಧ್ರಪ್ರದೇಶ ಹೈಕೋರ್ಟ್‌ಗೆ ಅದು ಕೇಳಿದೆ.
ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಮಾಚರ್ಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ನುಗ್ಗಿ ವಿವಿಪ್ಯಾಟ್ ಮತ್ತು ಇವಿಎಂ ಯಂತ್ರಗಳನ್ನು ಒಡೆದಿದ್ದಾರೆ ಎನ್ನಲಾಗಿದೆ.