Friday, June 14, 2024
Homeಬೆಂಗಳೂರುಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ಧರೆಗುರುಳಿದ ಮರಗಳು, ಪ್ರಾಣಾಪಾಯದಿಂದ ಹಲವರು ಪಾರು

ಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ಧರೆಗುರುಳಿದ ಮರಗಳು, ಪ್ರಾಣಾಪಾಯದಿಂದ ಹಲವರು ಪಾರು

ಬೆಂಗಳೂರು,ಜೂ.3- ನಿನ್ನೆ ಬಿದ್ದ ಧಾರಾಕಾರ ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು ಬೆಚ್ಚಿ ಬಿದ್ದಿದೆ. ನಗರದ ಹಲವು ಕಡೆ ನೂರಾರು ಮರಗಳು ಧರೆಗುರುಳಿ ಬಿದ್ದಿದ್ದು, ಕೆಲ ಪ್ರದೇಶಗಳಲ್ಲಿ ಹಲವು ಮಂದಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಗಳು ವರದಿಯಾಗಿವೆ.ಹುಳಿಮಾವು ರಸ್ತೆಯಲ್ಲಿ ಭಾರಿ ಗಾತ್ರ ಮರವೊಂದು ಪಾನಿಪುರಿ ಅಂಗಡಿ ಮೇಲೆ ಬಿದ್ದ ಪರಿಣಾಮ 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭಾರಿ ಮಳೆಗೆ ಶೇಷಾದ್ರಿಪುರಂ ಅಂಡರ್‌ಪಾಸ್‌‍ನಲ್ಲಿ ಹಾಳುದ್ದ ನೀರು ನಿಂತಿತ್ತು. ಅಂತಹ ಕೆಳಸೇತುವೆ ಮೂಲಕ ಚಲಿಸುತ್ತಿದ್ದ ಬಿಎಂಟಿಸಿ ಬಸ್‌‍ ಅಪಾಯಕ್ಕೆ ಸಿಲುಕುವ ಸುಳಿವು ಅರಿತ ಚಾಲಕ ಬಸ್‌‍ ಅನ್ನು ಸ್ಥಳದಲ್ಲೇ ನಿಲ್ಲಿಸಿದ ಪರಿಣಾಮ ಯಾವುದೆ ಅನಾಹುತ ಸಂಭವಿಸಿಲ್ಲ.

ನೀರಿನಲ್ಲಿ ಆರ್ಧ ಮುಳುಗಿದ್ದ ಬಸ್‌‍ನಲ್ಲಿದ್ದವರನ್ನು ಸ್ಥಳೀಯ ವ್ಯಕ್ತಿ ಮಣಿಕಂಠ ಎಂಬಾತ ಹೊರತಂದು ಸಾಹಸ ಮೆರೆದಿದ್ದಾರೆ. ಓರ್ವ ವದ್ಧೆ, ಇಬ್ಬರು ಮಹಿಳೆಯರು, ಒಂದು ಮಗುವನ್ನ ಬಸ್‌‍ ನಿಂದ ಹೊರ ಕರೆತಂದ ಮಣಿಕಂಠನ ಸಹಾಯದಿಂದ ಬಸ್‌‍ನಲ್ಲಿದ್ದ 20 ಪ್ರಯಾಣಿಕರು ನೆಮದಿಯ ನಿಟ್ಟುಸಿರುವ ಬಿಡುವಂತಾಯಿತು.ಅದೇ ರೀತಿ ಜನನಿಬಿಡ ಕೆಂಪೇಗೌಡ ರಸ್ತೆಯಲ್ಲಿರುವ ಪೋತೀಸ್‌‍ ಮುಂಭಾಗದ ಬೃಹತ್‌ ಮರವೊಂದು ಧರೆಗುರುಳಿ ಬಿದ್ದಿದ್ದು ಯಾವುದೇ ಅನಾಹುತ ನಡೆದಿಲ್ಲ. ಆದರೆ ಮರ ಬಿದ್ದ ರಭಸಕ್ಕೆ ಹಲವಾರು ವಾಹನಗಳು ಜಖಂಗೊಂಡಿವೆ.

ನೈಋತ್ಯ ಮಾನ್ಸೂನ್‌ ಎಫೆಕ್ಟ್‌‍ ಸಿಲಿಕಾನ್‌ ಸಿಟಿಯಲ್ಲಿ ಭಾರಿ ಮಳೆ
ಎಲ್ಲೇಲ್ಲಿ ಎಷ್ಟು ಮಳೆ:
ಹೆಚ್‌ಎಎಲ್‌ ಏರ್‌ರ್ಪೋರ್ಟ್‌- 9.2 ಮೀ ಮೀ ಮಳೆ ದಾಖಲು
ಎಲೆಕ್ಟ್ರಾನಿಕ್‌ ಸಿಟಿ – 29 ಮೀ ಮೀ ಮಳೆ
ಮಾದಾವರ – 4.5 ಮೀ ಮೀ ಮಳೆ
ಸೋಂಪುರ (ಬೆಂ. ನಗರ) – 5.5 ಮೀ ಮೀ ಮಳೆಯಾಗಿದೆ.
ಸಾಲುಗಟ್ಟಿ ನಿಂತ ವಾಹನಗಳು: ಮಳೆಯಿಂದಾಗಿ ನಗರದ ಹಲವಾರು ಮುಖ್ಯ ರಸ್ತೆಗಳಲ್ಲಿ ಕಿ.ಮೀಗಟ್ಟಲೆ ವಾಹನ ಸಂದಣಿ ಕಂಡು ಬಂತು. ಹೆಣ್ಣೂರು ಬಾಗಲೂರು ಮುಖ್ಯ ರಸ್ತೆಯಲ್ಲಿ ಸುಮಾರು 3 ಕಿಲೋ ಮೀಟರ್‌ ವರೆಗೂ ಟ್ರಾಫಿಕ್‌ ಜಾಮ್‌ ಆಗಿತ್ತು.

ಗೆದ್ದಲಹಳ್ಳಿ, ಕೊತ್ತನೂರು, ಹೆಣ್ಣೂರು ಭಾಗಗಳಲ್ಲಿ ಸ್ಲೋ ಮೂವಿಂಗ್‌ ಟ್ರಾಫಿಕ್‌ ಆಗಿತ್ತು. ಅದೇ ರೀತಿ ನಗರದ ಬಹುತೇಕ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದಾಗಿ ವಾಹನ ಸವಾರರು ಮನೆ ಸೇರಲು ಪರದಾಡುವಂತಾಗಿತ್ತು. ನಗರದ ಚಾಲುಕ್ಯ ಸರ್ಕಲ್‌ ನಲ್ಲಿ ಬಹತ್‌ ಮರ ಉರುಳಿ ಬಿದ್ದ ಹಿನ್ನೆಲೆಯಲ್ಲಿ ರೋಡ್‌ ಬ್ಲಾಕ್‌ ಆಗಿತ್ತು. ಹೀಗಾಗಿ ವಾಹನ ಸವಾರರು ಮುಂದೆ ಹೋಗಲು ಸಾಧ್ಯವಾಗದೆ ಹಲವಾರು ಗಂಟೆಗಳವರೆಗೂ ಪರದಾಡಿ ಮನೆ ಸೇರಬೇಕಾಯಿತು.

ಲೋಕಾಯುಕ್ತ ಕಛೇರಿ ಮುಂಭಾಗದ ರಸ್ತೆ ಜಲಾವತವಾಗಿದ್ದರಿಂದ ವಾಹನ ಸಂಚಾರ ಸಾಧ್ಯವಾಗಲಿಲ್ಲ. ನೀರಿನಲ್ಲಿ ಸಿಕ್ಕಿಹಾಕಿಕೊಂಡ ಕೆಲವು ಆಟೋಗಳು ಕೆಟ್ಟು ನಿಂತು ಪಜೀತಿಪಡುವಂತಾಯಿತು. ವರುಣನ ಆರ್ಭಟಕ್ಕೆ ಸಿಲಿಕಾನ್‌ ಸಿಟಿಯಲ್ಲಿ ನೂರಾರು ಮರಗಳು ಧಾರಾಶಾಹಿಯಾಗಿದ್ದು ಬಿಬಿಎಂಪಿ ಸಿಬ್ಬಂದಿಗಳು ರಾತ್ರಿಯಿಡಿ ಮರ ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು.

ಮೆಟ್ರೋ ಸಂಪರ್ಕ ಸ್ಥಗಿತ: ಟ್ರಿನಿಟಿ ಸರ್ಕಲ್‌ ಸಮೀಪದ ಮೆಟ್ರೋ ಟ್ರಾಕ್‌ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಎಂ.ಜಿ ರಸ್ತೆಯಿಂದ ಇಂದಿರಾನಗರದವರೆಗಿನ ಮೆಟ್ರೋ ಸಂಪರ್ಕ ಸ್ಥಗಿತಗೊಳಿಲಾಯಿತು. ಮರ ತೆರವು ಮಾಡಿದ ನಂತರ ಮೆಟ್ರೋ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಪ್ಯಾಲೆಸ್‌‍ ರಸ್ತೆಯಲ್ಲಿ ಕಾರಿನ ಮೇಲೆ ಮರ ಉರುಳಿಬಿದ್ದು ಕಾರು ಜಖಂಗೊಂಡಿದ್ದು ಕಾರಿನಲ್ಲಿ ಯಾರು ಇಲ್ಲದ ಪರಿಣಾಮ ಯಾವುದೆ ಅಪಾಯವಾಗಿಲ್ಲ.

ಕರೆಂಟ್‌ ಕಟ್‌:
ಬಸವೇಶ್ವರ ನಗರದಲ್ಲಿ 40ಕ್ಕೂ ಹೆಚ್ಚು ಮರಗಳು ಬಿದ್ದ ಪರಿಣಾಮ ಸುತ್ತಮುತ್ತಲ ಹಲವಾರು ಪ್ರದೇಶಗಳಲ್ಲಿ ರಾತ್ರಿಯಿಡಿ ಕರೆಂಟ್‌ ಇರಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೆಇಬಿಯವರು ಹರ ಸಾಹಸ ಪಟ್ಟು ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಗುವಂತೆ ನೋಡಿಕೊಂಡರು.ಬಿಬಿಎಂಪಿ ಸಿಬ್ಬಂದಿಗಳು ಕಂಬಗಳ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಕೆಇಬಿಯವರಿಗೆ ಸಹಕರಿಸಿದರು.

ಕೆರೆಯಂತಾದ ರಸ್ತೆ:
ಮಂತ್ರಿ ಮಾಲ್‌ ಮುಂಭಾಗದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದ ಕಾರಣ ನಿನ್ನೆ ಬಿದ್ದ ಮಳೆಗೆ ಇಡಿ ರಸ್ತೆ ಕೆರೆಯಂತಾಗಿತ್ತು. ರಾತ್ರಿ 10.30 ರವರೆಗೆ ಮಳೆಯಾದ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಸುತ್ತಮುತ್ತ ವಾಹನ ದಟ್ಟಣೆ ಕಂಡು ಬಂತು. ಮಂತ್ರಿ ಮಾಲ್‌ ರಸ್ತೆಯಲ್ಲಿ ವಾಹನ ಚಲಾಯಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮನೆಗಳಿಗೆ ನುಗ್ಗಿದ ನೀರು:
ಕೆಪಿ ಅಗ್ರಹಾರದ ಕಲ್ಯಾಣಿ ರಸ್ತೆಯಲ್ಲಿರುವ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಹೈರಾಣಾಗಿದ್ದರು. ಸಮೀಪದ ರಾಜಕಾಲುವೆ ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಕೊಳಚೆ ನೀರಿನಲ್ಲೇ ರಾತ್ರಿಯಿಡಿ ಜಾಗರಣೆ ನಡೆಸುವಂತಾಗಿತ್ತು.ಇಂತಹ ಅವ್ಯವಸ್ಥೆಗೆ ಕಾರಣರಾದ ಸ್ಥಳೀಯ ನಾಯಕರುಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕೂಡಲೆ ರಾಜಕಾಲುವೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.

ಬದುಕಿದ್ದೆ ಪವಾಡ:
ಅಶೋಕ ನಗರದ ಮ್ಯಾಗ್ರಾಥ್‌ ರಸ್ತೆಯಲ್ಲಿ ಏಕಾಏಕಿ ಬೃಹತ್‌ ಮರ ಉರುಳಿ ಬಿತ್ತು. ಉರುಳಿಬಿದ್ದ ಮರದ ಕೆಳಗೆ ಕಾರು ಮತ್ತು ಆಟೋ ಸಿಲುಕಿಕೊಂಡಿತು. ಆ ಸಂದರ್ಭದಲ್ಲಿ ಕಾರಿನಲ್ಲಿ ಕುಟುಂಬವಿದ್ದರೆ ಆಟೋದಲ್ಲಿ ಚಾಲಕ ಹಾಗೂ ಓರ್ವ ಪ್ರಯಾಣಿಕ ಇದ್ದರು ಎನ್ನಲಾಗಿದೆ.

ಅದೃಷ್ಟವಶಾತ್‌ ಕಾರು ಮತ್ತು ಆಟೋದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಗ್ನಲ್‌ ಇದೆ ಅಂತ ಆಟೋ ನಿಲ್ಲಿಸಿಕೊಂಡಿದ್ದೇ ಆ ಸಂದರ್ಭದಲ್ಲಿ ಏಕಾಏಕಿ ಮರ ಉರುಳಿಬಿತ್ತು ಅಂತಹ ಸಂದರ್ಭದಲ್ಲಿ ನಾನು ಬದುಕಿದ್ದೇ ಪುಣ್ಯ ಎನ್ನುತ್ತಾರೆ ಆಟೋ ಚಾಲಕ ಸೈಯದ್‌ ಅಯಾಸುದ್ದೀನ್‌. ಪಕ್ಕದಲ್ಲಿದ್ದ ಕಾರ್‌ ನಲ್ಲೂ ಫ್ಯಾಮಿಲಿ ಇದ್ರು ಅವರಿಗೂ ಯಾವುದೇ ಅನಾಹುತವಾಗಲಿಲ್ಲ. ಸುಧಾರಿಸಿಕೊಂಡ ನಂತರ ನಾವು ಮನೆ ಸೇರಿಕೊಂಡೆವು ಎಂದು ಚಾಲಕ ನೆಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಪರಿಹಾರಕ್ಕೆ ಸೂಚನೆ ;
ಕೊತ್ತನೂರು, ಕೆ.ಪಿ. ಅಗ್ರಹಾರ ಸೇರಿದಂತೆ ನಗರದ ಹಲವಾರು ತಗ್ಗುಪ್ರದೇಶಗಳ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದಿನನಿತ್ಯ ಬಳಕೆಯ ವಸ್ತುಗಳು ನಾಶವಾಗಿದ್ದು ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದ್ದಾರೆ.

ಜನರ ಆಕ್ರೋಶ:
ಮಳೆಗಾಲದ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಜ್ಜಾಗದಿರುವುದು ಪ್ರಜ್ಞಾವಂತ ನಾಗರೀಕರನ್ನು ಕೆರಳಿಸಿದೆ. ರಾಜಕಾಲುವ ಹೂಳು ತೆಗೆದಿಲ್ಲ. ರಸ್ತೆ ಮೇಲಿನ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಂಡಿಲ್ಲ ಕಳೆದ ಐದು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ನೀವೇನೂ ನಿದ್ದೇ ಮಾಡುತ್ತಿದ್ದೀರಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂಳು ತೆಗೆಯುವ ಕಾಮಗಾರಿಯಲ್ಲೂ ಗೋಲ್‌ಮಾಲ್‌ ಮಾಡಿದ್ದೀರಾ ಬ್ರಾಂಡ್‌ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಅಕ್ರಮ ನಡೆಸಿದ್ದೀರಾ ಎಂದು ಬಸವೇಶ್ವರ ನಗರದ ಸತ್ಯ ಎನ್ನುವವರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಮಳೆಯಾಗುವ ಮೊದಲೆ ಮಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಬೆಂಗಳೂರಿಗೆ ಒಂದು ಹೆಸರು ಇದೆ ಅದನ್ನ ಹಾಳಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಹೊರ ಹೋಗಲು ಏಣಿ ಸಹಾಯ;
ಬೆಳ್ಳಂದೂರು ಬಳಿಯ ಅಪಾರ್ಟೆಂಟ್‌ಮೆಂಟ್‌ಗೆ ನೀರು ನುಗ್ಗಿದ್ದು ಬೇಸ್‌‍ಮೆಂಟ್‌ನಲ್ಲಿ ಹಾಳುದ್ದ ನೀರು ನಿಂತಿರುವುದರಿಂದ 40 ಪ್ಲಾಟ್‌ಗಳ ನಿವಾಸಿಗಳು ಹೊರ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಜಲದಿಗ್ಬಂಧನ ವಿಧಿಸಿದಂತಾಗಿದೆ. ಹೊರ ಹೋಗಲೇಬೇಕಾದರೆ ಪಕ್ಕದ ಕಂಪೌಂಡ್‌ ಏಣಿ ಹಾಕಿ ಅದರ ಮೂಲಕ ಹೋಗುವಂತಾಗಿದೆ.

ಪದನಾಭ ನಗರ ವಿಧಾನಸಭಾ ಕ್ಷೇತ್ರದ ತ್ಯಾಗರಾಜ ನಗರದಲ್ಲಿ ಗೂಡ್ಸ್ ಅಟೋದ ಮೇಲೆ ಮರ ಬಿದ್ದು ಸುಮಾರು ಒಂದು ಗಂಟೆಗಳ ಕಾಲ ಡ್ರೈವರ್‌ ಹಾಗೂ ಸಹಾಯಕ ಅಟೋದಲ್ಲೆ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿತ್ತು. ಜೆಸಿಬಿ ಹಾಗೂ ಮರ ಕಟ್ಟು ಮಾಡುವ ಯಂತ್ರ ಬಂದು ಮರ ತೆರವು ಮಾಡುವವರೆಗೂ ಇಬ್ಬರು ಆಟೋದಲ್ಲೇ ಕಾಲ ಕಳೆಯಬೇಕಾಯಿತು.

ನಿವಾಸಿಗಳು ಲಾಕ್‌:
ವಿಜಯನಗರದ ಫೈಪ್‌ ಲೈನ್‌ ರಸ್ತೆಯಲ್ಲಿ ಮರ ಬಿದ್ದು ಮನೆಯೊಳಗೆ ನಿವಾಸಿಗಳು ಲಾಕ್‌ ಆಗುವಂತಾಗಿತ್ತು. ಬೃಹತ್‌ ಮರವೊಂದು ಉರುಳಿಬಿದ್ದು ನಾಲ್ಕು ಬೈಕ್‌ ಒಂದು ಕಾರು ಹಾನಿಗೊಳಗಾದವು. ಮರ ಮನೆಯೊಂದರ ಮುಂಭಾಗ ಬಿದ್ದು ಮನೆಯಲ್ಲಿನ ನಿವಾಸಿಗಳು ಹೊರ ಬಾರದಂತಾಗಿತ್ತು. ಈ ಕುರಿತಂತೆ ಬಿಬಿಎಂಪಿ ಸಿಬ್ಬಂದಿಗಳ ಗಮನಕ್ಕೆ ತಂದರೂ ಅವರು ಸಮಯಕ್ಕೆ ಸರಿಯಾಗಿ ಬಾರದಿರುವ ಹಿನ್ನೆಲೆಯಲ್ಲಿ ಹಲವು ಗಂಟೆಗಳ ಕಾಲ ನಿವಾಸಿಗಳು ಮನೆಯಲ್ಲೇ ಲಾಕ್‌ ಆಗುವಂತಾಯಿತು.

ಕುಸಿದ ರಸ್ತೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ರಸ್ತೆಯೇ ಕುಸಿದು ಬಿದ್ದಿದೆ. ಪ್ಯಾಚ್‌ ವರ್ಕ್‌ ಮಾಡಿ ಇನ್ನೂ ವಾರವೂ ಕಳೆದಿಲ್ಲ ಆಗಲೇ ರಸ್ತೆ ಕುಸಿದುಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಕುಸಿದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದಂತೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ.

RELATED ARTICLES

Latest News