ಬೆಂಗಳೂರು,ಏ.26- ವಿವಿಧ ಕಾರಣಗಳಿಂದ ತೆರವಾಗಿರುವ 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.
ಸಂಬಂಧಪಟ್ಟ ಜಿಲ್ಲೆಯ ಚುನಾವಣಾಧಿಕಾರಿಗಳು ಮೇ 8 ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಮೇ 14 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಮೇ 15 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಮೇ 17 ಕಡೆಯ ದಿನವಾಗಿದೆ.
ಮತದಾನದ ಅವಶ್ಯವಿದ್ದರೆ ಮೇ 25 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಸಲಾಗುತ್ತದೆ. ಮೇ 28 ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇ 8 ರಿಂದ ಮೇ 28ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆಯೋಗ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 135 ತಾಲ್ಲೂಕುಗಳ 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.