ಬೆಂಗಳೂರು,ಜೂ.13- ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೊ ಕಾರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರ್.ಆರ್.ನಗರದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನ ಮನೆ ಬಳಿ ಈ ಕಾರು ಪತ್ತೆಯಾಗಿದ್ದು, ರಾತ್ರಿಯೇ ಕಾರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ತಂದಿದ್ದು, ಈ ಕಾರು ಪುನೀತ್ ಎಂಬಾತನ ಹೆಸರಿನಲ್ಲಿರುವುದು ತಿಳಿದುಬಂದಿದೆ.ಶೆಡ್‌ನಿಂದ ಮೃತದೇಹ ಸಾಗಿಸಲು ನೆರವಾದ ಗ್ಯಾರೆಜ್ ಮಂಜನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಜೂ.8 ರಂದು ಡಿ ಬಾಸ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ನಗರಕ್ಕೆ ಕರೆತಂದ ಬಳಿಕ ಪಟ್ಟಣಗೆರೆ ಶೆಡ್‌ನಲ್ಲಿ ಅವರಿಗೆ ಚಿತ್ರಹಿಂಸೆ ನೀಡಿದ್ದಲ್ಲದೆ, ಸಿಗರೇಟ್‌ನಿಂದ ಸುಟ್ಟು, ಥಳಿಸಿ, ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ನಂತರ ಮೃತದೇಹ ಸಾಗಿಸಲು ಈ ತಂಡ ಸಂಚು ರೂಪಿಸಿದೆ.
ಆ ಸಂದರ್ಭದಲ್ಲಿ ನಟ ದರ್ಶನ್ 30 ಲಕ್ಷ ನೀಡುವುದಾಗಿ ಹೇಳಿ ಮೃತದೇಹವನ್ನು ಎಲ್ಲಾದರೂ ಬಿಸಾಕಿ ಎಂದು ತನ್ನ ಆಪ್ತ ಪ್ರದೋಷ್‌ಗೆ ಹೇಳಿದ್ದರು. ಹೀಗಾಗಿ ಪ್ರದೋಷ್ ಮತ್ತಿತರರೊಂದಿಗೆ ಸೇರಿಕೊಂಡು ಮೃತದೇಹವನ್ನು ಬಿಳಿ ಬಣ್ಣದ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಮನಹಳ್ಳಿಯಲ್ಲಿರುವ ಸತ್ಯ ಅಪಾರ್ಟ್‌ಮೆಂಟ್ ಮುಂಭಾಗದ ಮೋರಿಗೆ ಎಸೆದು ಹಿಂದಿರುಗಿದ್ದರು.
ಮೃತದೇಹ ಮಾರನೇ ದಿನ ಪತ್ತೆಯಾದಾಗ ಮೊದಲೇ ಅಂದುಕೊಂಡಂತೆ ಒಬ್ಬೊಬ್ಬರಾಗಿ ಶರಣಾಗಿದ್ದಾರೆ. ಆ ಬಳಿಕ ದರ್ಶನ್ ಹಾಗೂ ಪವಿತ್ರಾಗೌಡ ಸಹ ಖಾಕಿ ಖೆಡ್ಡಾಕ್ಕೆ ಬಿದ್ದಿದ್ದಾರೆ.