ಬೆಳಗಾವಿ,ಆ.11- ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ನಡೆಸಿದ ಪಾದಯಾತ್ರೆ ಬೆನ್ನಲ್ಲೇ ಪಾದಯಾತ್ರೆಯಲ್ಲಿ ಭಾಗವಹಿಸದ ಬಿಜೆಪಿಯ ಹಿರಿಯ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ನಗರ ಖಾಸಗಿ ಹೋಟೆಲೊಂದರ ಅತೃಪ್ತರ ಗುಪ್ತ ಸಭೆ ನಡೆದಿದ್ದು, ಅಪ್ಪ-ಮಕ್ಕಳ ಪಕ್ಷದ ಹಿಡಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ಬಿಜೆಪಿಯೊಳಗಿನ ಅತೃಪ್ತರನ್ನು ಈಗಾಗಲೇ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಪ್ಪಂದದ ರಾಜಕೀಯ ಮಾಡುತ್ತಿರುವ ಬಿಎಸ್‌ವೈ, ಬಿ.ವೈ.ವಿಜಯೇಂದ್ರ ಹಾಗೂ ಅಶೋಕ್‌ರವರ ನಡೆ ಖಂಡಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಹಿಂದೆ ಸರಿದಿದ್ದರು. ಬೆಳಗಾವಿ ಜಿಲ್ಲೆಯ ಯಾವ ನಾಯಕರೂ ಸಹ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಬಾಲಚಂದ್ರ ಜಾರಕಿಹೊಳಿ ಸಹ ಅಂತರ ಕಾಯ್ದುಕೊಂಡಿದ್ದರು.
ಈಗ ಅತೃಪ್ತ ನಾಯಕರು ಸಭೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಯತ್ನಾಳ್ ನೇತೃತ್ವದಲ್ಲಿ ಮತ್ತೊಂದು ತಂಡ ಸಕ್ರಿಯವಾಗುತ್ತಿದೆ ಎನ್ನಲಾಗಿದೆ.
ಬಿಜೆಪಿಯ ಬಲಾಢ್ಯ ನಾಯಕರಿಗೆ ಈ ಗುಂಪಿನ ಕಾರ್ಯಚಟುವಟಿಕೆಗಳು ನುಂಗಲಾರದ ತುತ್ತಾಗಿವೆ. ಉತ್ತರ ಕರ್ನಾಟಕದ ಪ್ರಮುಖ ನಾಯಕರು ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರೂ ಹಲವು ಜನ ನಾಯಕರು ಯತ್ನಾಳ್ ಅವರ ಹಿಂದೆ ಇರುವುದು ಸ್ಪಷ್ಟವಾಗಿದೆ.ನಿನ್ನೆ ಯತ್ನಾಳ್, ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.