Wednesday, October 16, 2024
Homeರಾಜಕೀಯ | Politicsಜೆಡಿಎಸ್‌‍-ಬಿಜೆಪಿ ಪಾದಯಾತ್ರೆಯಿಂದ ಮತ್ತಷ್ಟು ಗಟ್ಟಿಯಾಯ್ತು ಸಿದ್ದರಾಮಯ್ಯ ಸಿಎಂ ಕುರ್ಚಿ

ಜೆಡಿಎಸ್‌‍-ಬಿಜೆಪಿ ಪಾದಯಾತ್ರೆಯಿಂದ ಮತ್ತಷ್ಟು ಗಟ್ಟಿಯಾಯ್ತು ಸಿದ್ದರಾಮಯ್ಯ ಸಿಎಂ ಕುರ್ಚಿ

ಬೆಂಗಳೂರು,ಆ.11– ವಿಪಕ್ಷ ಜೆಡಿಎಸ್‌‍ ಮತ್ತು ಬಿಜೆಪಿ ಪಾದಯಾತ್ರೆ ಹೋರಾಟಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ.ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಬಳಸಿ ಲೋಪವೆಸಗಿದ್ದಾರೆ. ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್‌‍ ಪಕ್ಷಗಳು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಿದ್ದವು. ಇದು ಕಾಂಗ್ರೆಸ್‌‍ ಪಕ್ಷಕ್ಕೆ ಮುಜುಗರ ಉಂಟುಮಾಡಬಹುದು, ಸಿದ್ದರಾಮಯ್ಯನವರಿಗೆ ಕಂಟಕವಾಗಲಿದೆ ಎಂಬ ವ್ಯಾಖ್ಯಾನಗಳಿದ್ದವು. ಆದರೆ ಪರಿಣಾಮ ಸಂಪೂರ್ಣ ವ್ಯತಿರಿಕ್ತವಾಗಿದೆ.

ವಿಪಕ್ಷಗಳ ಹೋರಾಟಕ್ಕೆ ಕಾಂಗ್ರೆಸ್‌‍ ರಾಜಕೀಯವಾಗಿಯೇ ಉತ್ತರ ನೀಡಿದೆ. ಇಡೀ ಪಕ್ಷ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿರುವುದರಿಂದ ಕಾಂಗ್ರೆಸ್‌‍ ಒಳಗಿನ ಸಿದ್ದರಾಮಯ್ಯ ವಿರೋಧಿಗಳ ಬಾಯಿ ಕೂಡ ಬಂದ್‌ ಆದಂತಾಗಿದೆ.

ಪಾದಯಾತ್ರೆಗೆ ತಿರುಗೇಟು ನೀಡುವ ಸಲುವಾಗಿ ಕಾಂಗ್ರೆಸ್‌‍ ಒಂದು ದಿನ ಮೊದಲೇ ಐದು ಕಡೆ ಬೃಹತ್‌ ಸಮಾವೇಶಗಳನ್ನು ಆಯೋಜಿಸಿ ಆರಂಭದಿಂದ ಕೊನೆಯವರೆಗೂ ಇಂಚಿಂಚೂ ಬೆಳವಣಿಗೆಗಳನ್ನು ಜನರ ಮುಂದಿಟ್ಟಿರುವುದಲ್ಲದೆ, ಬಿಜೆಪಿ-ಜೆಡಿಎಸ್‌‍ ನಾಯಕರ ಭೂ ಹಗರಣಗಳನ್ನು ಬಯಲು ಮಾಡಿದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್‌‍ ಪಕ್ಷದಲ್ಲಿ ಭರ್ಜರಿ ಒಗ್ಗಟ್ಟು ಪ್ರದರ್ಶನಗೊಂಡಿದ್ದು, ಸಿದ್ದರಾಮಯ್ಯ ಅವರ ಜೊತೆ ಎಲ್ಲಾ ನಾಯಕರೂ ದೃಢವಾಗಿ ಬೆಂಬಲಕ್ಕೆ ನಿಲ್ಲುವಂತ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದೆ.

ಸಿದ್ದರಾಮಯ್ಯನವರು ಹೇಳಿಕೇಳಿ ಜನನಾಯಕರು. ಅವರಿಗೆ ಅವರದೇ ಆದಂತಹ ಮತಬ್ಯಾಂಕ್‌ ಇದೆ. ಕಾಂಗ್ರೆಸ್‌‍ ಹೊರತಾಗಿಯೂ ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆಲ್ಲಬಲ್ಲರು ಮತ್ತು ಬಯಸಿದವರನ್ನು ಸೋಲಿಸಬಲ್ಲರು ಎಂಬ ಅಭಿಪ್ರಾಯಗಳು ಸಾರ್ವತ್ರಿಕ. ಈ ಹಿಂದೆ ಅಷ್ಟೇನೂ ಪ್ರಭಾವಿಯಾಗಿರದ ಕಾಲದಲ್ಲಿಯೂ ಎಬಿಪಿಜೆಡಿ ಅನ್ನು ಸ್ಥಾಪಿಸಿ ಜನತಾದಳದ ಸೋಲಿಗೆ ಮುನ್ನುಡಿ ಬರೆದಿದ್ದರು.

ಕಾಂಗ್ರೆಸ್‌‍ಗೆ ಬಂದು ಮುಖ್ಯಮಂತ್ರಿಯಾದ ಬಳಿಕ ತಮದೇ ಆದ ಹಿಂಬಾಲಕರನ್ನು ಸೃಷ್ಟಿಸಿಕೊಂಡಿರುವುದಲ್ಲದೆ ಅಧಿಕಾರದಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳಿಂದಾಗಿ ಮತಬ್ಯಾಂಕ್‌ ಅನ್ನು ಕ್ರೂಢೀಕರಿಸಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌‍ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎಂಬ ಪರಿಸ್ಥಿತಿ ಉದ್ಭವಿಸಿದೆ.ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಅವರನ್ನು ಅಸ್ತಿರಗೊಳಿಸಬಹುದು ಎಂಬ ಲೆಕ್ಕಾಚಾರಗಳು ಸಂಪೂರ್ಣ ತಲೆಕೆಳಗಾಗಿವೆ.

ಕಾಂಗ್ರೆಸ್‌‍ ಪಕ್ಷ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, ಶಾಸಕರೂ ಕೂಡ ಸಿದ್ದರಾಮಯ್ಯ ರಾಜ್ಯದ ಮಟ್ಟಿಗೆ ಸರ್ವೋಚ್ಛ ನಾಯಕ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಹೀಗಾಗಿ ಬಿಜೆಪಿ-ಜೆಡಿಎಸ್‌‍ನ ಪಾದಯಾತ್ರೆ ಖಾಲಿಕೊಡದಂತಾಗಿದೆ.ಇನ್ನೇನಿದ್ದರೂ ಕಾನೂನಾತಕ ಹೋರಾಟಗಳಷ್ಟೇ ಮುಡಾ ಪ್ರಕರಣದಲ್ಲಿ ಪರಿಣಾಮ ಉಂಟುಮಾಡಬಲ್ಲದೇ ಹೊರತು ಪಾದಯಾತ್ರೆ ಅಥವಾ ರಾಜಕೀಯ ಹೋರಾಟಗಳು ವ್ಯರ್ಥ ಪ್ರಯತ್ನಗಳು ಎಂಬುದು ಸ್ಪಷ್ಟವಾಗಿದೆ.

ಗಾಜಿನ ಮನೆಯಲ್ಲಿರುವವರು ಹೊರಗಡೆ ಇರುವವರಿಗೆ ಕಲ್ಲು ಹೊಡೆಯಬಾರದು ಎಂಬುದು ರಾಜಕೀಯದಲ್ಲಿ ಅಘೋಷಿತವಾದ ಸತ್ಯ. ಅದಕ್ಕೆ ತಕ್ಕ ಹಾಗೆ ಪಾದಯಾತ್ರೆಯ ನೀರಸ ಪರಿಣಾಮ ವಿಪಕ್ಷಗಳನ್ನು ಬೆಸ್ತು ಬೀಳುವಂತೆ ಮಾಡಿದೆ.ಕಾಂಗ್ರೆಸ್‌‍ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದರಿಂದಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಅಲುಗಾಡಿಸುವ ಪ್ರಯತ್ನ ವ್ಯರ್ಥವಾಗಿದೆ.

RELATED ARTICLES

Latest News