Saturday, December 14, 2024
Homeರಾಷ್ಟ್ರೀಯ | NationalBIG NEWS : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!

BIG NEWS : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!

ನವದೆಹಲಿ, ಡಿ.13- ಲೋಕಸಭೆ ಅಧಿವೇಶನ ನಡೆಯುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಆಗಂತುಕರು ಏಕಾಏಕಿ ಸಂಸದರೆಡೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಬಿಗಿಭದ್ರತೆ ನಡುವೆಯೂ ಈ ಭದ್ರತಾ ಲೋಪ ಭಾರೀ ಸಂಚಲನ ಸೃಷ್ಟಿಸಿದೆ.

ಇಂದು ಮಧ್ಯಾಹ್ನ 1 ಗಂಟೆ ಸಂದರ್ಭದಲ್ಲಿ ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರ ಆಸನದೆಡೆಗೆ ನೆಗೆದ ಇಬ್ಬರು ವ್ಯಕ್ತಿಗಳು ಮೇಜುಗಳ ಮೇಲೇರಿ ಅಸಂಬದ್ಧವಾಗಿ ವರ್ತಿಸಿದ್ದಾರೆ.ಕೂಡಲೇ ಸ್ಪೀಕರ್ ಏನಾಗುತ್ತಿದೆ ಎಂದು ತಿಳಿಯದೆ ಸಂಸತ್‍ನ ಮಾರ್ಷಲ್‍ಗಳನ್ನು ಕರೆದಿದ್ದಾರೆ. ಗದ್ದಲ ಏರ್ಪಟ್ಟಾಗ ಸದನವನ್ನು ಮುಂದೂಡಿದ್ದಾರೆ. ಸಂಸದರನ್ನು ಯಾಮಾರಿಸಿ ಇಬ್ಬರು ವ್ಯಕ್ತಿಗಳು ಕೆಲವು ನಿಮಿಷಗಳ ಕಾಲ ಎಲ್ಲೆಂದರಲ್ಲಿ ನುಗ್ಗಿ ಕೆಲ ಸಮಯ ಭೀತಿಯ ವಾತಾವರಣ ಸೃಷ್ಟಿಯಾಯಿತು.


ಕೆಲ ಸಂಸದರು ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಿಗದೆ ಆ ಇಬ್ಬರು ವ್ಯಕ್ತಿಗಳು ಮೇಜಿನಿಂದ ಮೇಜಿಗೆ ಜಿಗಿದು ಹೈಡ್ರಾಮಾ ಸೃಷ್ಟಿಸಿದ್ದಾರೆ.ಇದೇ ವೇಳೆ ಈ ಇಬ್ಬರು ಹೊಗೆ ಬರುವ ರಾಸಾಯನಿಕ (ಕಲರ್ ಸ್ಪ್ರೇ) ತಂದು ಸಿಂಪಡಿಸಿದ್ದರಿಂದ ಕೆಲವರು ವಿಚಲಿತರಾದರು. ಕೂಡಲೇ ಮಾರ್ಷಲ್‍ಗಳು ಅವರಿಬ್ಬರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ಸಂಸತ್ ಪ್ರವೇಶಿಸುವಾಗ ಸಾರ್ವಜನಿಕರ ಪ್ರತಿಯೊಂದು ಮಾಹಿತಿಯನ್ನೂ ಕೂಡ ಕಲೆ ಹಾಕಲಾಗುತ್ತದೆ ಮತ್ತು ಒಳ ಪ್ರವೇಶಿಸುವಾಗ ಅವರನ್ನು ಕೂಲಂಕುಶವಾಗಿ ಪರೀಕ್ಷಿಸಲಾಗುತ್ತದೆ. ಆದರೆ, ಈ ಇಬ್ಬರು ಹೇಗೆ ಪ್ರೇಕ್ಷಕರ ಗ್ಯಾಲರಿಗೆ ಬಂದರು ಎಂಬುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಳೆದ 2001ರಲ್ಲಿ ಸಂಸತ್ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು.ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಸಂಸತ್‍ನ ಒಳಗೆ ಹಾಗೂ ಹೊರಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ನಡುವೆಯೇ ಈ ಘಟನೆ ನಡೆದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಖಲಿಸ್ತಾನ್ ನಾಯಕ ಸಂಸತ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದಾಗಿದೆ.

ಸಂಸತ್ ಆವರಣಕ್ಕೆ ಭದ್ರತಾ ಪಡೆಗಳು ಕೂಡ ದಾವಿಸಿದ್ದು, ಸಂಸದರಿಗೆ ಸುರಕ್ಷತೆ ನೀಡಿದ್ದಾರೆ. ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದು, ಸುಮಾರು ಅರ್ಧ ಗಂಟೆ ಕಾಲ ಸಂಸತ್‍ನಲ್ಲಿ ನೆರೆದಿದ್ದ ಸಂಸದರು ವಿಚಲಿತರಾದರು.

RELATED ARTICLES

Latest News