ಬೆಂಗಳೂರು,ಏ.21- ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ಮಾಜಿ ಮೇಯರ್ ನಿವಾಸದಲ್ಲಿ ಸುಮಾರು ಒಂದು ಕೆಜಿಗೂ ಹೆಚ್ಚು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಆರ್‍ಎಂವಿ 2ನೇ ಸ್ಟೇಜ್, 80 ಅಡಿ ರಸ್ತೆಯಲ್ಲಿರುವ ನಾರಾಯಣಸ್ವಾಮಿ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದೆ. ಏ.18ರಂದು ನಾರಾಯಣಸ್ವಾಮಿ ಅವರು ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಸುಮಾರು 3 ಗಂಟೆ ಸಂದರ್ಭದಲ್ಲಿ ಅವರ ಪತ್ನಿ ದೇವಸ್ಥಾನಕ್ಕೆ ತೆರಳಿದ್ದರು.
ಎಂದಿನಂತೆ ಅವರು ಮನೆಯ ಕೀ ಅನ್ನು ಬಾಗಿಲ ಸಮೀಪವೇ ಇಟ್ಟು ಸೆಕ್ಯೂರಿಟಿ ಗಾರ್ಡ್‍ಗೆ ತಿಳಿಸಿ ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಸೆಕ್ಯೂರಿಟಿ ಗಾರ್ಡ್ ಬಾಗಿಲು ತೆರೆದು ನಂತರ ಕೋಣೆಗೆ ತೆರಳಿ ಬೀರು ಒಡೆದು ಅದರಲ್ಲಿದ್ದ 1 ಕೆಜಿ 400 ಗ್ರಾಂ ಚಿನ್ನಾಭರಣ, 22 ಕೆಜಿ ಬೆಳ್ಳಿವಸ್ತುಗಳು, 4 ಲಕ್ಷ ನಗದು, 3 ವಾಚ್ ಸೇರಿದಂತೆ ಸುಮಾರು 1.29 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸುಮಾರು ಸಂಜೆ 5.30ರ ಸುಮಾರಿಗೆ ನಾರಾಯಣಸ್ವಾಮಿ ಅವರ ಪತ್ನಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಕೆಲ ವಸ್ತುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ.
ನಂತರ ಸೆಕ್ಯೂರಿಟಿ ಗಾರ್ಡ್‍ನ್ನು ಕೂಗಿದರೂ ಆತ ಬಾರದಿದ್ದಾಗ ಮನೆಯವರಿಗೆ ಹಾಗೂ ಪೊಲೀಸರು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಂಜಯನಗರ ಪೊಲೀಸರು ಪರಿಶೀಲನೆ ನಡೆಸಿ ಸೆಕ್ಯೂರಿಟಿ ಗಾರ್ಡ್ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಆತ ಇಲ್ಲಿ ಕೆಲಸಕ್ಕೆ ಸೇರಿದಾಗ ಆಧಾರ್ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ ಎಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಸೆಕ್ಯೂರಿಟಿ ಗಾರ್ಡ್ ಪತ್ತೆಗೆ ಬಲೆ ಬೀಸಿದ್ದಾರೆ.