Monday, June 17, 2024
Homeರಾಜಕೀಯದೀರ್ಘಕಾಲ ಆಡಳಿತ ನಡೆಸಿ ಚೆಂಬು ಕೊಟ್ಟ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತೆ : ಬೊಮ್ಮಾಯಿ

ದೀರ್ಘಕಾಲ ಆಡಳಿತ ನಡೆಸಿ ಚೆಂಬು ಕೊಟ್ಟ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತೆ : ಬೊಮ್ಮಾಯಿ

ಬೆಂಗಳೂರು,ಏ.21- ಕೇಂದ್ರ ಮತ್ತು ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಆಡಳಿತ ನಡೆಸಿದ ಕಾಂಗ್ರೆಸ್‍ಗೆ ರಾಜ್ಯದ ಜನತೆಗೆ ಚೆಂಬು ಕೊಟ್ಟ ಕೀರ್ತಿ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ವರ್ಷಕ್ಕೆ ರೈತರಿಗೆ 10 ಸಾವಿರ ರೂ. ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಿ ಅವರ ಕೈಗೆ ಚೆಂಬು ಕೊಟ್ಟಿದ್ದು ನೀವಲ್ಲವೇ? ಎಂದು ಪ್ರಶ್ನಿಸಿದರು.

ರೈತ ವಿದ್ಯಾನಿಧಿ ನಿಲ್ಲಿಸಿರುವುದು , ಹೆಣ್ಣು ಮಕ್ಕಳಿಗೆ ಕನಿಷ್ಟಪಕ್ಷ ಶೌಚಾಲಯ ಕಟ್ಟಿಸಿಕೊಡದಿರುವುದು, ವಿವೇಕಾನಂದ ಶಾಲೆ, ಆಸ್ಪತ್ರೆ, ರಸ್ತೆ ಎಲ್ಲವನ್ನೂ ಸ್ಥಗಿತಗೊಳಿಸಿ ಕರ್ನಾಟಕ ಮತ್ತು ಕನ್ನಡಿಗರಿಗೆ ಚೆಂಬು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದೇವೇಗೌಡರು ಆರೂವರೆ ದಶಕದ ತಮ್ಮ ರಾಜಕೀಯ ಅನುಭವದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. 2014ರಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಜನತೆಗೆ ನಿಜವಾಗಿ ಚೆಂಬನ್ನೇ ಕೊಟ್ಟಿತ್ತು. ಈಗ ಮೋದಿಯವರು ಆ ಚೆಂಬನ್ನು ಅಕ್ಷಯಪಾತ್ರೆ ಮಾಡಿದ್ದಾರೆ. ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಹಿರಿಯರಾದ ದೇವೇಗೌಡರ ಬಗ್ಗೆಯೂ ಮಾತನಾಡುತ್ತಾರೆ ಎಂದು ಸಿಡಿಮಿಡಿಗೊಂಡರು.

ರೈತರಿಗೆ 54 ಸಾವಿರ ಕೋಟಿ ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗಿದೆ. 6 ಲಕ್ಷ ಬೀದಿ ವ್ಯಾಪಾರಿಗಳಿಗೆ ವಿಶೇಷ ಅನುದಾನ, ಕೋವಿಡ್ ಸಂದರ್ಭದಲ್ಲಿ ಉಚಿತ ಲಸಿಕೆ, ಎರಡು ವರ್ಷ ಉಚಿತ ಆಹಾರಧಾನ್ಯ ವಿತರಣೆ ಕೊಟ್ಟಿದ್ದಾರೆ. ಇದು ಅಕ್ಷಯ ಪಾತ್ರೆಯೇ ಇಲ್ಲವೇ ಖಾಲಿ ಚೆಂಬೇ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಚುನಾವಣೆಗೂ ಮುನ್ನವೇ ನೀವು 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದೀರಿ. ಈಗ ಎಷ್ಟು ಅಕ್ಕಿ ಕೊಡುತ್ತಿದ್ದೀರಿ. ಚೆಂಬಿನ ಜಾಹೀರಾತು ಕೊಟ್ಟಿದ್ದೀರಿ. ನಿಮಗೆ ಆತ್ಮಸಾಕ್ಷಿ ಇದ್ದಿದ್ದರೆ ನಾಚಿಯಾಗಬೇಕಿತ್ತು ಎಂದು ಕಿಡಿಕಾರಿದರು. ನೇರ ಮತ್ತು ಪ್ರತ್ಯಕ್ಷ ತೆರಿಗೆ ಬಗ್ಗೆ ಪ್ರಸ್ತಾಪಿಸದೆ ಕಾಂಗ್ರೆಸ್ ಸುಳ್ಳು ಜಾಹೀರಾತು ನೀಡಿದೆ. ಡೆವಲ್ಯೂಷನ್ ಫಂಡ್ ಬಗ್ಗೆ ಇದೆ. ಇದು ನೆಹರೂ ಕಾಲದಿಂದಲೂ ಈ ಟ್ಯಾಕ್ಸ್ ಇದೆ. ಈ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಯುಪಿಎ ಅವಧಿಯಲ್ಲಿ 2004-14 ರ ವರೆಗೂ 81,795 ಕೋಟಿ. ಎನ್‍ಡಿಎ ಸರ್ಕಾರದಲ್ಲಿ 2014-24ರವರೆಗೂ 2,88,798 ಕೋಟಿ ಬಂದಿದೆ. ಎರಡು ಲಕ್ಷ ಕೋಟಿಗೂ ಹೆಚ್ಚು ಡೆವಲ್ಯೂಷನ್ ಹಣ ಬಂದಿದೆ. ಅನ್ಯಾಯ ಆಗಿದೆ ಎನ್ನುತ್ತಾರೆ. ನಾನು ಕೌಂಟರ್ ಪ್ರಶ್ನೆ ಮಾಡ್ತೀನಿ. ನೂರು ರೂಪಾಯಿ ಅನುಪಾತ ಮಾಡ್ತೀರಿ ಎಂದು ಸವಾಲು ಹಾಕಿದರು.

ಹಿಂದೆ 100ರೂ. ತೆರಿಗೆ ಕಟ್ಟಿದರೆ ರಾಜ್ಯಕ್ಕೆ 13 ರೂ. ಮಾತ್ರ ರಾಜ್ಯಕ್ಕೆ ಬರುತ್ತದೆ ಎಂದು ನಾಯಕರು ಹೇಳುತ್ತಿದ್ದಾರೆ. ಯುಪಿಎ ಸರ್ಕಾರಕ್ಕೆ ಹೋಲಿಸಿದರೆ 4 ರೂ. ಬರುತ್ತಿತ್ತು ಅಂದರೆ ಈಗ 13 ರೂ. ಬರುತ್ತಿದೆ ಎಂದ ಅವರು, ಗ್ರಾಂಟಿ ಯುಪಿಎ ಅವಧಿಯಲ್ಲಿ 2004-14 60,779.84. ಎನ್‍ಡಿಎ ಅವಧಿಯಲ್ಲಿ ಗ್ರಾಂಟ್ 2014-24ರವರೆಗೂ 2,08,832 ಕೋಟಿ. ಐದು ಸಾವಿರ ಕೋಟಿ ಹೆಚ್ಚಾಗಿ ಬಂದಿದೆ ಎಂದು ವಿವರಣೆ ನೀಡಿದರು.

ಕಳೆದ ವರ್ಷವೂ ಹೆಚ್ಚು ಬಂದಿದೆ. 1ಲಕ್ಷ 30 ಸಾವಿರ ಕೋಟಿ ಲೋನ್ ಕೊಟ್ಟಿದ್ದಾರೆ. ಕರ್ನಾಟಕಕ್ಕೆ 6,012 ಕೋಟಿ ಬಂದಿದೆ. ಬಡ್ಡಿ ರಹಿತ ಸಾಲ ನೀಡಿದ್ದು, 15 ವರ್ಷಗಳ ಬಳಿಕ ಸಾಲ ವಾಪಸ್ ನೀಡಬೇಕು ಎಂದು ವಿವರಿಸಿದರು. ಬಹಳ ತಳಮಟ್ಟಕ್ಕೆ ಹೋಗಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಸುಳ್ಳನ್ನ ನೂರು ಬಾರಿ ಹೇಳಿ, ಸತ್ಯ ಮಾಡಲು ಹೊರಟಿದೆ. ಭಾರತದಲ್ಲಿ ಇಷ್ಟು ಕೆಳಮಟ್ಟಕ್ಕೆ ಹೋಗಿರುವ ಕೀಳು ಸರ್ಕಾರ ಮತ್ತೊಂದಿಲ್ಲ. ಯುಪಿಎ ಸರ್ಕಾರ ಇದ್ದಾಗ ಅವರು ಜಾಹೀರಾತು ನೀಡಿದ್ದಾರೆ.

RELATED ARTICLES

Latest News