Monday, May 6, 2024
Homeರಾಷ್ಟ್ರೀಯಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತೆ : ಸುರ್ಜಿತ್ ಭಲ್ಲಾ

ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತೆ : ಸುರ್ಜಿತ್ ಭಲ್ಲಾ

ನವದೆಹಲಿ,ಏ.21- 2019ರ ಲೋಕಸಭೆ ಚುನಾವಣೆಯಲ್ಲಿ ಸಾಧಿಸಿದ್ದಕ್ಕಿಂತ ಈ ಬಾರಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿ 330ರಿಂದ 350 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹಿರಿಯ ಆರ್ಥಿಕ ತಜ್ಞ ಮತ್ತು ಫೋಷಾಲಜಿಸ್ಟ್ ಸುರ್ಜಿತ್ ಭಲ್ಲಾ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿ ನೀಡಿರುವ ಸಂದರ್ಶದನಲ್ಲಿ ಮಾತನಾಡಿರುವ ಅವರು, ಈ ಬಾರಿ ಬಿಜೆಪಿ ಒಂದೇ 330 ರಿಂದ 350 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ. ಮೈತ್ರಿ ಪಕ್ಷಗಳು ಜೊತೆಗಿರುವುದರಿಂದ ಅದರ ಸ್ಥಾನಗಳು ಇನ್ನಷ್ಟು ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಚುನಾವಣೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ನನ್ನ ಅಂದಾಜಿನ ಪ್ರಕಾರ 2019ರ ಫಲಿತಾಂಶಕ್ಕೆ ಹೋಲಿಸಿದರೆ ಮತ ಗಳಿಕೆಯಲ್ಲಿ ಬಿಜೆಪಿ 5ರಿಂದ 7ರಷ್ಟು ಹೆಚ್ಚಳ ಮಾಡಿಕೊಳ್ಳುವ ಸಂಭವವಿದೆ. ಇದನ್ನು ಅಂಕಿಅಂಶಗಳಿಗೆ ಪರಿವರ್ತಿಸಿದರೆ 330 ರಿಂದ 350 ಆಗಬಹುದು ಎಂದು ಅಂದಾಜಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ತುಂಬ ಅರ್ಥಗರ್ಭಿತವಾಗಿ ವಸ್ತುನಿಷ್ಠ ಆಧಾರದ ಮೇಲೆ ವಿಶ್ಲೇಷಣೆ ಮಾಡುವ ಸುರ್ಜಿತ್ ಭಲ್ಲಾ ಅವರು, ದೇಶದಲ್ಲಿ ಮತ್ತೆ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಯಾವ ಕಾರಣದಿಂದ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ತಮ್ಮದೇ ಆದ ಉದಾಹರಣೆಗಳನ್ನು ನೀಡಿದ್ದಾರೆ.

ವಿರೋಧ ಪಕ್ಷಗಳ ದೌರ್ಬಲ್ಯವೇ ಮೋದಿ ಗೆಲುವಿನ ಪ್ರಮುಖ ಶಕ್ತಿ. ಮೋದಿ ಅವರ ನಾಯಕತ್ವಕ್ಕೆ ಸರಿಸಾಟಿಯಾಗುವ ಪ್ರಬಲ ನಾಯಕತ್ವ ಇಂಡಿಯಾ ಮೈತ್ರಿಕೂಟ ಇಲ್ಲವೇ ತೃತೀಯ ಬಣದಲ್ಲೂ ಇಲ್ಲ. ಇದು ಬಿಜೆಪಿ ಗೆಲುವಿಗೆ ಮೊದಲ ಹೆಜ್ಜೆ ಆಗಲಿದೆ ಎಂದಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಮೋದಿಯವರು ದೊಡ್ಡ ಮಟ್ಟದಲ್ಲಿ ಸುಧಾರಣೆ ಮಾಡಿಲ್ಲವಾದರೂ ಕೆಲವು ಕಾರ್ಯಕ್ರಮಗಳು ಜನರಿಗೆ ಮನಸೋತಿದ್ದಾರೆ. ನೆಹರು, ಇಂದಿರಾಗಾಂಧಿ ನಂತರ ಪ್ರಾಯಶಃ ದೇಶದ ಜನ ಮಾನಸದಲ್ಲಿ ಇಷ್ಟು ಆಳವಾಗಿ ಬೇರೂರಿದ ಹೆಸರು ಎಂದರೆ ಅದು ನರೇಂದ್ರಮೋದಿ. ಹೀಗಾಗಿ ಗೆಲುವಿಗೆ ದಾರಿ ಸುಲಭವಾಗಲಿದೆ ಎಂದಿದ್ದಾರೆ.

ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಕುಸಿತ, ಜಿಡಿಪಿ ಇವುಗಳು ಒಂದಿಷ್ಟು ಪ್ರಮಾಣದಲ್ಲಿ ಮತದಾರರ ಮೇಲೆ ಪರಿಣಾಮ ಬೀರಬಹುದು. ಆದರೆ ಇದನ್ನು ಹೇಗೆ ವಿಷಯಾಂತರ ಮಾಡಬಹುದು ಎಂಬುದನ್ನು ಮೋದಿ ಕಳೆದ ಚುನಾವಣೆಯಲ್ಲೇ ಸಾಧಿಸಿ ತೋರಿಸಿದ್ದಾರೆ. ಮೋದಿ ಅಬ್ಬರದ ಪ್ರಚಾರದ ಮುಂದೆ ವಿರೋಧ ಪಕ್ಷಗಳ ಪ್ರಚಾರ ತೀರಾ ಪೇಲವ ಎನಿಸುತ್ತಿದೆ. ಈ ಎಲ್ಲ ಅಂಶಗಳು ಬಿಜೆಪಿಗೆ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆಯಬಹುದು ಅಥವಾ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಪಡೆಯಬಹುದು.

ಬಿಜೆಪಿ ಸಾಂಪ್ರದಾಯಿಕವಾಗಿ ದುರ್ಬಲ ಪಕ್ಷವಾಗಿರುವ ತಮಿಳುನಾಡಿನಲ್ಲಿ ಬಿಜೆಪಿ ಕನಿಷ್ಠ ಐದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕೇರಳದಲ್ಲಿ, ಬಹುಶಃ ಒಂದು ಅಥವಾ ಎರಡು ಸ್ಥಾನ ಗೆಲ್ಲಬಹುದು ಎಂದು ಭಲ್ಲಾ ಹೇಳಿದ್ದಾರೆ. ಜನರ ಜೀವನದಲ್ಲಿ ಎಷ್ಟು ಸುಧಾರಣೆಯಾಗಿದೆ ಎಂಬುದರ ಆಧಾರದ ಮೇಲೆ ಭಾರತವು ಮತ ಚಲಾಯಿಸುತ್ತದೆ. ಅದು ಮೂಲ ಆಧಾರವಾಗಿದೆ. ಇದು ಜಾತಿ ಅಲ್ಲ, ಲಿಂಗವಲ್ಲ, ಜನರು ಆರೋಪಿಸುವ ವಿವಿಧ ಅಂಶಗಳಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

RELATED ARTICLES

Latest News