ಕೊಳ್ಳೇಗಾಲ,ನ.1-ಮುಖ್ಯ ಮಂತ್ರಿ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪಿಸುವುದು ಬೇಡ, ಯಾರೊಬ್ಬರೂ ಮಾತನಾಡಕೊಡದೆಂದು ವರಿಷ್ಠರ ಆಜ್ಞೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ತಿಳಿಸಿದರು.
ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ವಸತಿಗೃಹಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ. ಎಂ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಕುರಿತು ಎಂಎಲ್‌ಎ ಹಾಗೂ ಸಚಿವರು ಯಾರೊಬ್ಬರೂ ಮಾತನಾಡಕೊಡದೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಸೂಚನೆಯಾಗಿದೆ. ಪಕ್ಷದ ವರಿಷ್ಠರು ನಿಮಗೆ ನೀಡಿರುವ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿ ಬೇರೆ ವಿಷಯ ಮಾತನಾಡಬೇಡಿ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ನಿಮ ಸಚಿವ ಸ್ಥಾನವು ಹೋಗಲಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ನೀವು ನನ್ನ ಭವಿಷ್ಯ ತೀರ್ಮಾನ ಮಾಡಿ ನುಡಿಯುವರಾಗಿದ್ದರೆ ಕರ್ನಾಟಕದ ಎಲ್ಲಾ ಜನರು ನಿಮ ಮನೆಯ ಬಾಗಿಲಿನಲ್ಲಿ ನಿಲ್ಲುತ್ತಿದ್ದರು. ಇಂತಹ ಪ್ರಶ್ನೆಗಳನ್ನು ಕೇಳುವ ಚಾಳಿ ಬಿಡಬೇಕು. ಸಚಿವ ಸಂಪುಟದ ವಿಚಾರವನ್ನು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಪಕ್ಷ ಸಚಿವರಾಗಿ ಒಳ್ಳೆಯ ಕೆಲಸಮಾಡಿ ಎಂದು ಅವಕಾಶ ನೀಡಿದೆ ಸಚಿವ ಸ್ಥಾನ ಬೇಡ ಪಕ್ಷಕ್ಕೆ ದುಡಿ ಎಂದು ಹೇಳಿದರೆ ದುಡಿಯುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದರು.
ಕಳೆದ ವರ್ಷ ಎಸ್‌ಎಸ್‌ಎಸ್‌ಸಿ ಪರೀಕ್ಷೆ ಒಂದು ಬಾರಿ ನಡೆಸಿ ಆ ಪರೀಕ್ಷೆಯಲ್ಲಿ ಫೇಲಾದ ವಿಧ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ 1 ಲಕ್ಷದ 16 ಸಾವಿರ ವಿದ್ಯಾಥಿಗಳು ಪಾಸಾಗಿ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಶುಲ್ಕ ಪಡೆಯದೆ ಅವಕಾಶ ನೀಡಿದ್ದು ಇದರಲ್ಲಿ ಬಡವರು ಹಿಂದುಳಿದ ವರ್ಗದವರು, ಕಷ್ಟದಲ್ಲಿರುವವರು ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವಂಥ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸಿದೆ ಎಂದು ತಿಳಿಸಿದರು.
ಈ ಹಿಂದೆ 13ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು ಮತ್ತೆ 13 ಸಾವಿರ ಶಿಕ್ಷಕರನ್ನು ನೇಮಕಮಾಡಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರುಗಳು ಇದ್ದರು.
