ಬೆಂಗಳೂರು,ನ.30- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತ್ಯಾಗರಾಜ ನಗರದ ಖಾಸಗಿ ಶಾಲೆ ಮುಖ್ಯಸ್ಥ ಗುರಪ್ಪ ನಾಯ್ಡು ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ
ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಷದಿಂದ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಪಕ್ಷದ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ಕ್ರಮ ಕೈಗೊಂಡಿದ್ದು, ಗುರಪ್ಪ ನಾಯ್ಡು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿದ್ದಾರೆ.
ಖಾಸಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಗುರಪ್ಪ ನಾಯ್ಡು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಹೆದರಿಸುವುದು, ಮಾತನಾಡುವ ನೆಪದಲ್ಲಿ ಕಚೇರಿಗೆ ಕರೆದು ಕೆಟ್ಟದಾಗಿ ನೋಡುವುದು, ಯಾವಾಗ ರೆಡಿಯಾಗ್ತಿಯಾ ಎಂದು ಅಸಭ್ಯವಾಗಿ ವರ್ತಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದರು.
ಶಿಕ್ಷಕಿ ನೀಡಿದ ದೂರಿನ ಮೇರೆಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಇನ್ಸ್ಪೆಕ್ಟರ್ ಬದಲು ವಿವಿಪುರಂ ಠಾಣೆಯ ಇನ್ಸ್ಪೆಕ್ಟರ್ ತನಿಖೆ ನಡೆಸಲು ಪೊಲೀಸ್ ಆಯುಕ್ತರು ಸೂಚಿಸಿದ್ದರು.
ಗುರಪ್ಪ ನಾಯ್ಡು ಈ ಹಿಂದೆ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಪದನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರ್.ಅಶೋಕ್ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.