ಬೆಂಗಳೂರು,ಸೆ.17- ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದ ಕೋಮುಗಲಭೆಯನ್ನು ರಾಜ್ಯ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಆಕಸಿಕವಾಗಿ ನಡೆದ ಗಲಾಟೆ ಅಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಪೆಟ್ರೋಲ್ ಬಾಂಬ್‌ಗಳು ಎಲ್ಲಿಂದ ಬಂದವು? ಮಾಸ್ಕ್‌ಗಳನ್ನು ಏಕೆ ಖರೀದಿಸಲಾಯಿತು? ಎಂದು ಪ್ರಶ್ನಿಸಿದರು.ಸತ್ಯಾಸತ್ಯತೆ ಹೊರಬರಬೇಕೆಂದರೆ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವೇ ಇಲ್ಲ. ಹೀಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಅಪರಾಧಿಗಳು, ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅನೇಕ ಕಡೆ ಪ್ಯಾಲೇಸ್ತೈನ್ ಧ್ವಜ ಹಿಡಿದುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆ. ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲವೇ ಎಂದು ಕಿಡಿಕಾರಿದರು.ರಾಜ್ಯದ ಕೆಲವು ಕಡೆ ನಡೆದ ಗಲಭೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸದಸ್ಯರು ಶಾಮೀಲಾಗಿದ್ದಾರೆ. ನ್ಯಾಯ ಕೊಡಬೇಕಾದ ಸರ್ಕಾರ ಸಣ್ಣ ಘಟನೆ ಎಂದು ತಿಪ್ಪೇ ಸಾರುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಶಾಸಕ ಮುನಿರತ್ನ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕು. ಕಾನೂನು ಏನು ಕ್ರಮ ಕೈಗೊಳ್ಳೊತ್ತೊ ಅದೇ ಆಗಲಿ. ಎಸ್‌ಎಫ್‌ಎಲ್ ವರದಿ ಬರಬೇಕು. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಸಾಲು ಸಾಲು ಕೋಮುಗಲಭೆಗಳು ಸರಣಿ ರೂಪದಲ್ಲಿ ನಡೆಯುತ್ತಿದ್ದರೂ ಪೊಲೀಸರು ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ವಿಷಾದಿಸಿದ್ದಾರೆ.
ಮಂಗಳೂರು, ನಾಗಮಂಗಲ ಸೇರಿದಂತೆ ಅನೇಕ ಕಡೆ ಗಲಭೆ ಪ್ರಕರಣಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಪೊಲೀಸರು ಸತ್ವ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಹೇಳುವ ಕೆಲಸವನ್ನಷ್ಟೇ ಪೊಲೀಸರು ಮಾಡುತ್ತಿದ್ದಾರೆ. ಅವರ ಕೈಯನ್ನು ಸಂಪೂರ್ಣವಾಗಿ ಕಟ್ಟಿ ಹಾಕಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೋಟ್ ಬ್ಯಾಂಕ್ ಮನಸ್ಥಿತಿಯಿಂದ ನಾವು ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಒಂದೇ ಒಂದು ಕಳಂಕ ಇಲ್ಲ ಎನ್ನುತ್ತಾರೆ. ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ, ಮುಡಾ ಭ್ರಷ್ಟಾಚಾರ ಬಯಲಿಗೆ ಬರುತ್ತಿದೆ, ಮಹರ್ಷಿ ವಾಲೀಕಿ ಹಗರಣ 187 ಕೋಟಿ ಹಗರಣ ಆಗಿದೆ ಅದು ಕಳಂಕ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ನೀವು ಉತ್ತರ ಕೊಡುವ ವೇದಿಕೆ ವಿಧಾನಸಭೆ, ವಿಧಾನಪರಿಷತ್. ಅಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ್ದೀರಿ.
ನ್ಯಾಯಾಲಯದ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಅದರ ವಿರುದ್ಧ ಆಂದೋಲನ ಮಾಡಿಸುತ್ತೀರ, ನೀವೇ ಜಡ್‌್ಜ ಆಗುತ್ತೀರ, ನೀವೇ ವಕೀಲರಾಗುತ್ತೀರಿ ಎಂದು ವ್ಯಂಗ್ಯವಾಡಿದ ಅವರು, ವಿಶೇಷ ಅಧಿವೇಶನ ಕರಿಯಿರಿ, ಚರ್ಚೆ ಮಾಡೋಣ ಎಂದು ಒತ್ತಾಯಿಸಿದರು.