ಬೆಂಗಳೂರು,ಅ.19- ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜೊತೆ ಹಿಂದುಳಿದ ವರ್ಗಗಳ ಸಮೀಕರಣದೊಂದಿಗೆ ಆಯಕಟ್ಟಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಇದರ ಮೊದಲ ಭಾಗವಾಗಿ ಲೋಕಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಮುಂದಾಗಿದ್ದು, ಜಾತಿ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಕರಂದ್ಲಾಜೆ ಅವರನ್ನು ನೇಮಿಸಲು ಪಕ್ಷದ ಹೈಕಮಾಂಡ್ ಆಸಕ್ತಿ ತೋರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಮುಖರ ಅಭಿಪ್ರಾಯ ಕೇಳಲಾಗಿದ್ದು, ಶೀಘ್ರದಲ್ಲೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದು ಬಿಎಸ್‍ವೈ ಆಸೆಯಾಗಿತ್ತು.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಯಡಿಯೂರಪ್ಪ ಸಹಕಾರ ಅವಶ್ಯಕ. ಹಾಗಾಗಿ ವಿಜಯೇಂದ್ರ ಬದಲಿಗೆ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲು ಹೈಕಮಾಂಡ್ ಪರಿಶೀಲಿಸಿತ್ತು. ಈ ಪ್ರಸ್ತಾಪವನ್ನು ಬಿಎಸ್‍ವೈ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.
ಪಕ್ಷ ಸಂಘಟನೆ ದೃಷ್ಟಿಯಿಂದ ಈ ಹುದ್ದೆಗೆ ವಿಜಯೇಂದ್ರ ಹೆಸರನ್ನೇ ಪರಿಗಣಿಸಿ ಎಂದು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಬಿಎಸ್‍ವೈ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾನಾ ಆಯಾಮಗಳಿಂದ ಪರಾಮರ್ಶೆ ನಡೆಸಿದ ಹೈಕಮಾಂಡ್, ಶೋಭಾ ಕರಂದ್ಲಾಜೆ ಈ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದೆ. ಈ ನೇಮಕಕ್ಕೆ ಬಿಎಸ್‍ವೈ ಬೆಂಬಲಿಸುತ್ತಾರೆ.
ಇತರ ನಾಯಕರೂ ನಿರಾಕರಣೆ ಮಾಡುವುದಿಲ್ಲ ಎಂಬ ಅಂಶವನ್ನು ಹೈಕಮಾಂಡ್ ಕಂಡುಕೊಂಡಿದೆ. ಈ ನಡುವೆ ಶೋಭಾ ಕರಂದ್ಲಾಜೆ ನಿಯೋಜನೆ ಸಂಬಂಧದಲ್ಲಿ ಬಿಎಸ್‍ವೈ ಅವರನ್ನು ಸಂಪರ್ಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಭವಿಷ್ಯತ್ತಿನಲ್ಲಿ ಆದರೂ ಪ್ರತಿಪಕ್ಷದ ನಾಯಕನ ಆಯ್ಕೆಗೆ ವಿಳಂಬವಾಗಲಿದೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಚೇತರಿಸಿಕೊಂಡ ಬಳಿಕ ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಸಾಕಲಾಗದೆ ಕಂದನನ್ನು ಕೆರೆಗೆ ಎಸೆದ ಕರುಣೆಯಿಲ್ಲದ ತಂದೆ
ಜಾತಿ ಸಮೀಕರಣ: ಪ್ರತಿ ಬಾರಿಯೂ ಬಿಜೆಪಿಯಲ್ಲಿ ಜಾತಿ ರಾಜಕಾರಣವೂ ಮುಖ್ಯವಾಗುತ್ತದೆ. ಈ ಬಾರಿಯೂ ಸಹ ಪ್ರಬಲ ಸಮುದಾಯ ಲಿಂಗಾಯತರಿಗೆ ಒಂದು ಹುದ್ದೆಯನ್ನು ನೀಡಲೇಬೇಕು. ಇನ್ನೊಂದು ಹುದ್ದೆಯನ್ನುಒಕ್ಕಲಿಗರಿಗೆ ನೀಡುವ ಚಿಂತನೆ ನಡೆದಿದೆ. ರಾಜ್ಯದಲ್ಲಿ ನಾಲ್ಕು ಜನ ಕೇಂದ್ರ ಸಚಿವರಿದ್ದು, ಆ ಪೈಕಿ ಒಕ್ಕಲಿಗ ಸಮುದಾಯದ ಮಹಿಳಾ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ಯೋಜನೆಗೆ ಪಕ್ಷ ಮುಂದಾಗಿದೆ ಎಂದು ಹೇಳಲಾಗಿದೆ.
ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಸವಾಲಿಗೆ ತೆಗೆದು ಕೊಂಡಿದದ್ದ ವಿ.ಸೋಮಣ್ಣ, ಚುನಾವಣಾ ಸೋಲಿನ ಬಳಿಕ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಹೈಕಮಾಂಡ್ ಮುಂದೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸೋಮಣ್ಣ ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಆರ್.ಅಶೋಕ್ ಹೆಸರುಗಳು ಕೇಳಿಬಂದಿವೆ. ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಡುವ ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯಗ್ನಾಳ್‍ಗೆ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿರುವ ಯತ್ನಾಳ್ ಸದನದಲ್ಲಿ ಗಟ್ಟಿಯಾಗಿ ಸರ್ಕಾರವನ್ನು ಟೀಕಿಸಿ ವಾಗ್ದಾಳಿ ನಡೆಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರ ಹೆಸರನ್ನು ಪರಿಗಣಿಸಲಾಗಿದೆ. ಆದರೆ ಅದಕ್ಕೆ ಯಡಿಯೂರಪ್ಪ ಒಪ್ಪದೆ ಇದ್ದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ತಾತ್ಕಾಲಿಕವಾಗಿ ಚುನಾವಣೆ ಮುಗಿಯುವವರೆಗೂ ನೇಮಕ ಮಾಡಲಾಗುತ್ತದೆ ಅಥವಾ ಬೇರೆ ಸಮುದಾಯದ ನಾಯಕರಿಗೂ ಅವಕಾಶ ನೀಡುವ ಸಾಧ್ಯತೆ ಇದೆ.
ಲಿಂಗಾಯತ ಸಮುದಾಯಕ್ಕೆ ಕೈತಪ್ಪಿದರೆ ಶಾಸಕ ಸುನೀಲ್ ಕುಮಾರ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ನಂತರ ಪ್ರತಿಪಕ್ಷ ನಾಯಕನ ಸ್ಥಾನವನ್ನೂ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆ ಕಡಿಮೆ. ಆದರೆ ದೆಹಲಿಯಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ಇದೆಲ್ಲಾ ನಿರ್ಧಾರವಾಗಬೇಕಿರುವುದರಿಂದ ನೇಮಕವಾಗುವವರೆಗೂ ಬಿಜೆಪಿ ನಾಯಕರಿಗೆ ಕಾದುನೋಡದೆ ಬೇರೆ ಮಾರ್ಗವಿಲ್ಲದಂತಾಗಿದೆ.