ನವದೆಹಲಿ,ಮಾ.16- ಲೋಕಸಭೆ ಚುನಾವಣೆ ಜೊತೆಯಲ್ಲೇ ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನಡೆಯಲಿದೆ.ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯ್ಕ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 26 ವಿಧಾನಸಭಾ ಕ್ಷೇತ್ರಗಳಿಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಚುನಾವಣೆ ನಡೆಸುವುದಾಗಿ ಪ್ರಕಟಿಸಿದರು.
ಉಪಚುನಾವಣೆಗೆ ಏಪ್ರಿಲ್ 12 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸಬಹುದು. ಏ.19 ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಏ.22 ರವರಗೆ ಕಾಲಾವಕಾಶವಿದೆ.
ಮೇ 7 ರಂದು ಮತದಾನ ನಡೆಯಲಿದ್ದು, ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವ ಜೂನ್ 4 ರಂದೇ ಈ ಉಪಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.