ನವದೆಹಲಿ, ಆ.21– ಸಾಮಾಜಿಕ ಜಾಲತಾಣದಲ್ಲಿ ಸದಾ ಬ್ಯುಸಿಯಾಗಿರುವ ಬಾಲಿವುಡ್ ನಟಿ ಶ್ರದ್ಧಾಕಪೂರ್ ಅವರು ಇನ್ಸ್ಟಾಗ್ರಾಮ್ನ ಫಾಲೋಯಿಂಗ್ನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹಿಂದಿಕ್ಕುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳ ಪಟ್ಟಿಯಲ್ಲಿ ಭಾರತದ ಸೆಲೆಬ್ರಿಟಿಗಳು, ಕ್ರಿಕೆಟಿಗರು ಹಾಗೂ ರಾಜಕಾರಣಿಗಳ ಸಾಲಿನಲ್ಲಿ ಕಿಂಗ್ ಕೊಹ್ಲಿ 27 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ನಂಬರ್ 1 ಸ್ಥಾನದಲ್ಲಿದ್ದರೆ, ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 9.18 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ.
ಮೂರನೇ ಬಾರಿಗೆ ಭಾರತ ದೇಶದ ಪ್ರಧಾನಿಯಾಗುವ ಮೂಲಕ ದಾಖಲೆ ನಿರ್ಮಿಸಿರುವ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಮ್ ಗುಂಪಿನಲ್ಲಿ 9.13 ಕೋಟಿ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದರು.ಆದರೆ ಇತ್ತೀಚೆಗೆ ಬಾಲಿವುಡ್ ಚಿತ್ರ `ಸ್ತ್ರೀ 2′ ಸಿನಿಮಾ ಬಿಡುಗಡೆ ಬೆನ್ನಲ್ಲೇ ಈ ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಅವರು 9.14 ಕೋಟಿ ಅನುಯಾಯಿಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹೊಂದಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಇನ್ನು ಬಾಲಿವುಡ್ ನಟಿಯರಾದ ಕತ್ರೀನಾ ಕೈಫ್ (8.4 ಕೋಟಿ) ಅಲಿಯಾ ಭಟ್ (8.1 ಕೋಟಿ), ದೀಪಿಕಾ ಪಡುಕೋಣೆ (7.98 ಕೋಟಿ), ನೇಹಾ ಕಕ್ಕರ್ (7.87 ಕೋಟಿ) ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದರೆ , 6.93 ಕೋಟಿ ಅನುಯಾಯಿಗಳನ್ನು ಹೊಂದಿರುವ ಸಲಾನ್ಖಾನ್ ನಟರುಗಳ ಸಾಲಿನಲ್ಲಿ ನಂಬರ್ 1 ಸ್ಥಾನ ಹೊಂದಿದ್ದಾರೆ.
ನಾಲ್ಕೇ ದಿನಕ್ಕೆ 283 ಕೋಟಿ:
ಮಹಿಳಾ ಪ್ರಧಾನ ಹಾಗೂ ಹಾಸ್ಯಭರಿತ `ಸ್ತ್ರೀ 2 ‘ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಆಗೂ ಶ್ರದ್ಧಾಕಪೂರ್ ಅವರು ನಟಿಸಿದ್ದು, ಈ ಚಿತ್ರದ ಬಿಡುಗಡೆಗೊಂಡ ಬಹುತೇಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ನಾಲ್ಕೇ ದಿನಕ್ಕೆ 283 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
ಟ್ವಿಟ್ಟರ್ನಲ್ಲಿ ಮೋದಿ ನಂಬರ್ 1:
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಅಥವಾ ಎಕ್ಸ್ ಖಾತೆಯಲ್ಲಿ 10.12 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ನಂಬರ್ 1 ಸ್ಥಾನದಲ್ಲಿದ್ದರೆ, ಜಾಗತಿಕ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ದುಬೈ ದೊರೆ ಶೇಖ್ ಮೊಹಮ್ಮದ್ ಮತ್ತು ಪೋಪ್ ಫ್ರಾನ್ಸಿಸ್ ನಂತರದ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ 2.67 ಕೋಟಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 2.76 ಕೋಟಿ ಎಕ್ಸ್ ಫಾಲೋವರ್ಸ್ ಹೊಂದಿದ್ದಾರೆ.