Saturday, July 27, 2024
Homeರಾಜ್ಯತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಿಎಂ ಬಿಎಸ್ವೈ ಅವರ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಾಸ್ವಾಮಿ ನಿಧನ

ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಿಎಂ ಬಿಎಸ್ವೈ ಅವರ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಾಸ್ವಾಮಿ ನಿಧನ

ಬೆಂಗಳೂರು, ಜೂ.6- ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಪ್ತ ಸಹಾಯಕ ಹಾಗೂ ಬಿಜೆಪಿ ಮುಖಂಡ ಕಾ.ಪು.ಸಿದ್ದಲಿಂಗಾಸ್ವಾಮಿ ಅವರು ಇಂದು ಮುಂಜಾನೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಆರೇಳು ತಿಂಗಳಿನಿಂದ ಕಾ.ಪು. ಸಿದ್ದಲಿಂಗಸ್ವಾಮಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಸಂಜೆ 4 ಗಂಟೆಗೆ ಕಾ.ಪು.ಸಿದ್ದಲಿಂಗಸ್ವಾಮಿ ಅಂತ್ಯಕ್ರಿಯೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ನಡೆಯಲಿದೆ. ಲಿಂಗಾಯತ ವಿಧಿ -ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ.

ಕಾ.ಪು.ಸಿದ್ದಲಿಂಗಸ್ವಾಮಿ ಹಲವು ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಆಪ್ತರಾಗಿ ಕೆಲಸ ನಿರ್ವಹಣೆ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಜೊತೆಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಕಾ.ಪು.ಸಿದ್ದಲಿಂಗಸ್ವಾಮಿ ಅವರನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ನೇಮಕ ಮಾಡಲಾಗಿತ್ತು.

ಯಡಿಯೂರಪ್ಪ ಆಪ್ತರಾಗಿದ್ದ ಕಾ.ಪು. ಸಿದ್ದಲಿಂಗಸ್ವಾಮಿ ಯಡಿಯೂರಪ್ಪ ಕೆಜೆಪಿ ಪಕ್ಷವನ್ನು ಕಟ್ಟಿದಾಗ ಅವರ ಜೊತೆಗೆ ಇದ್ದರು. ಆ ಕಾರಣಕ್ಕಾಗಿಯೇ ವರುಣ ಕ್ಷೇತ್ರದಲ್ಲಿ ಅವರನ್ನು ಕೆಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲಾಗಿತ್ತು.

ಕೆಜೆಪಿ ಅಭ್ಯರ್ಥಿಯಾಗಿದ್ದ ಅವರು 54,744 ಮತಗಳನ್ನು ಪಡೆದು, ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ಧ (84,385 ಮತ) ಸೋಲು ಕಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ವರುಣದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾದರು. ಆದರೆ ಕಾ.ಪು. ಸಿದ್ದಲಿಂಗಸ್ವಾಮಿಗೆ ಕಣಕ್ಕಿಳಿಯಲಿಲ್ಲ.

2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾ.ಪು.ಸಿದ್ದಲಿಂಗಸ್ವಾಮಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆಗ ಪ್ರತಿಕ್ರಿಯೆ ನೀಡಿದ್ದ ಅವರು, ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು. ನಾನು ಕಾಂಗ್ರೆಸ್‌ ಸೇರುತ್ತಿದ್ದೇನೆ ಎಂಬ ಸಂಗತಿ ಉಹಾಪೋಹವಾಗಿದ್ದು, ನನ್ನ ಕತ್ತು ಸೀಳಿದರೂ ಸಹ ಅದು ಸಾಧ್ಯವಾಗುವುದಿಲ್ಲ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾದ ನಾನು ವರುಣದಲ್ಲಿ ವಿ. ಸೋಮಣ್ಣ ಗೆಲುವಿಗಾಗಿ ಪಣ ತೊಟ್ಟಿದ್ದೇನೆ. ನನ್ನ ಮೊದಲ ಮತ್ತು ಕೊನೆಯ ಮತ ಬಿಜೆಪಿಗೆ ಎಂದು ತಿಳಿಸಿದ್ದರು.

RELATED ARTICLES

Latest News