ಬೆಂಗಳೂರು,ಏ.14- ಡಾ.ಬಿ.ಆರ್.ಅಂಬೇಡ್ಕರ್ ಅವರು ಮತ್ತೆ ಹುಟ್ಟಿಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಹೇಳಬೇಕಾಗಿರುವುದು ಅದಲ್ಲ, ಯಾವ ಆರ್‍ಎಸ್‍ಎಸ್ ನಾಯಕರು ಹೇಳಿದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂಬುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲಾತಾಣದಲ್ಲಿ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿಯವರು, ಪ್ರಧಾನಿ ನರೇಂದ್ರ ಮೋದಿಯವರೇ, ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲವೇ, ಅವರ ಅನುಯಾಯಿಗಳಿಂದ ಅಲ್ಲ, ಅಪಾಯ ಎದುರಾಗಿರುವುದು ನಿಮ್ಮ ಮಾತೃಸಂಸ್ಥೆಯಾದ ಆರ್‍ಎಸ್‍ಎಸ್ ಮತ್ತು ಅದರ ನಾಯಕರಿಂದ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಇತಿಹಾಸವನ್ನು ಮರೆಯಬಾರದೆಂದು ನಮಗೆ ಪಾಠ ಮಾಡಿದವರು ಇದೇ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಹೇಳಿದ್ದಾರೆ.
ಆರ್‍ಎಸ್ ಎಸ್ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದ ಸಾಲುಗಳಲ್ಲಿ, ಭಾರತ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ ಏನಂದರೆ, ಅದರಲ್ಲಿ ಭಾರತೀಯತೆ ಎನ್ನುವುದೇ ಇಲ್ಲ, ಪುರಾತನ ಭಾರತದ ಕಾನೂನು-ಕಟ್ಟಳೆಗಳಾಗಲಿ, ಸಂರಚನೆಗಳಾಗಲಿ, ನುಡಿಗಟ್ಟುಗಳಾಗಲಿ ಯಾವುದೂ ಇಲ್ಲ. ಸ್ವಾರ್ಥದ ಲೈಕುರ್ಗಸ್ ಅಥವಾ ಪರ್ಸಿಯಾದ ಸೊಲೊನ್ ಬರೆಯುವುದಕ್ಕು ಮೊದಲೇ ಮನು ಈ ನಿಯಮಗಳನ್ನು ಇಲ್ಲಿ ರಚಿಸಿದ್ದರು.
ಇಂದಿಗೂ ಮನುಸಂಸ್ಮತಿಯಲ್ಲಿ ಮನು ಉಲ್ಲೇಖಿಸಿರುವ ಕಾನೂನುಗಳು ಪ್ರಪಂಚದ ಗೌರವಕ್ಕೆ ಪಾತ್ರವಾಗಿವೆ ಮತ್ತು ಸ್ವಾಭಾವಿಕ ವಿಧೇಯತೆ ಮತ್ತು ಅನುಸರಣೆಯಲ್ಲಿವೆ. ಆದರೆ ನಮ್ಮ ಸಂವಿಧಾನವನ್ನು ರಚಿಸಿದ ಪಂಡಿತರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ ಎಂದು ಟೀಕಿಸಲಾಗಿತ್ತು. ಪ್ರಧಾನಿಯವರು ಇದನ್ನು ಒಪ್ಪುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಧಾನಿಯವರು ಬಾಬಾಸಾಹೇಬ್ ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿ ನೀಡಿದ ಕರಡು ಪ್ರತಿಯನ್ನು ನಮ್ಮ ದೇಶ ಅಂಗೀಕರಿಸಿದ್ದು 1949ರ ನವಂಬರ್ 26ರಂದು. ಅದಾಗಿ ಕೇವಲ ನಾಲ್ಕೇ ದಿನಕ್ಕೆ ಅಂದರೆ 1949ರ ನವಂಬರ್ 30ರಂದು ನಿಮ್ಮ ಮಾತೃಸಂಸ್ಥೆಯಾದ ಆರ್‍ಎಸ್‍ಎಸ್ ಬರೆದಿರುವ ಈ ಸಂಪಾದಕೀಯದ ಬಗ್ಗೆ ಈಗಿನ ನಿಮ್ಮ ನಿಲುವು ಏನು? ಸಂಪಾದಕೀಯದ ಅಭ್ರಿಪ್ರಾಯಗಳನ್ನು ನಿರಾಕರಿಸುತ್ತೀರಾ ಎಂದು ಪ್ರಧಾನಿಯವರಿಗೆ ಮುಖ್ಯಮಂತ್ರಿ ಸವಾಲೆಸೆದಿದ್ದಾರೆ.
ಆರ್‍ಎಸ್‍ಎಸ್‍ನ ಸಂಸ್ಥಾಪಕರಲ್ಲಿ ಒಬ್ಬರಾದ ಎಂ.ಎಸ್.ಗೋಳ್ವಾಲ್ಕರ್, ನಮ್ಮದು ಎಂದು ಹೇಳಲಾಗುತ್ತಿರುವ ಈ ಸಂವಿಧಾನವು, ಪಾಶ್ಚಾತ್ಯ ದೇಶಗಳ ಸಂವಿಧಾನಗಳಿಂದ ಬೇರೆಬೇರೆ ಕಲಮ್ಮುಗಳನ್ನು ಹೆಕ್ಕಿ ತಂದು ಒಟ್ಟುಗೂಡಿಸಿದ ಕಂತೆಯಾಗಿದ್ದು, ಇದರಲ್ಲಿ ಹಲವಾರು ತೊಡಕುಗಳು ಮತ್ತು ಭಿನ್ನ ನಿಲುವುಗಳು ಎದ್ದು ಕಾಣುತ್ತವೆ. ನಮ್ಮದು ಎಂದು ಕರೆದುಕೊಳ್ಳುವ ಯಾವ ಭಾರತೀಯ ಅಂಶವೂ ಇದರಲ್ಲಿಲ್ಲ. ನಮ್ಮ ರಾಷ್ಟ್ರೀಯ ಕಾರ್ಯಯೋಜನೆ ಏನು ಮತ್ತು ನಮ್ಮ ಬದುಕಿನ ಮುಖ್ಯ ಧಾತುವೇನು ಎಂಬುದರ ಬಗ್ಗೆ ಇದರ ನಿರ್ದೇಶಕ ತತ್ವಗಳಲ್ಲಿ ಒಂದೇ ಒಂದು ಪದವಿದೆಯೇ? ಎಂದು ಪ್ರಶ್ನಿಸಿದರು.
ಗೋಳ್ವಾಲ್ಕರ್‌ರನ್ನು ಗುರೂಜಿ ಎಂದೇ ಗೌರವಿಸುವ ಪ್ರಧಾನಿಯವರು ಈವರೆಗೂ ಅವರ ಅಭಿಪ್ರಾಯಗಳಿಗೆ ಸಹಮತ ಇದೆಯೇ ಅಥವಾ ಭಿನ್ನಮತ ಇದೆಯೇ ಎಂದು ಸ್ಪಷ್ಟಪಡಿಸಿಲ್ಲ. ಇನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ದೇಶಭಕ್ತ ಎಂದು ಬಿಂಬಿಸಲಾದ ವಿನಾಯಕ ದಾಮೋದರ ಸಾವರ್ಕರ್ ಅವರ ಪುಸ್ತಕದಲ್ಲಿ ಸಂವಿಧಾನದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ.
ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದ್ದು, ಅನಾದಿ ಕಾಲದಿಂದಲೂ ನಮ್ಮ ಸಂಸ್ಕøತಿ – ಸಂಪ್ರಾದಯ, ಆಲೋಚನೆಗಳು ಮತ್ತು ಆಚಾರಗಳಿಗೆ ಅದುವೇ ಆಧಾರವಾಗಿದೆ. ಶತಮಾನಗಳಿಂದ ನಮ್ಮ ದೇಶವು ಸಾಗಿಬಂದ ಆಧ್ಯಾತ್ಮಿಕ ಮತ್ತು ದೈವಿಕ ಪಥಗಳಿಗೆ ಈ ಕೃತಿಯೇ ಕ್ರೋಢೀಕೃತ ರೂಪವಾಗಿದೆ.
ಇಂದಿಗೂ ಕೋಟ್ಯಂತರ ಹಿಂದೂಗಳು ತಮ್ಮ ಜೀವನ ಮತ್ತು ಆಚರಣೆಗಳಲ್ಲಿ ಅನುಸರಿಸುತ್ತಿರುವ ಕಟ್ಟಳೆಗಳಿಗೆ ಈ ಮನುಸ್ಮೃತಿಯೇ ಮೂಲವಾಗಿದೆ. ಇವತ್ತು ಮನುಸ್ಮೃತಿಯೇ ಹಿಂದೂ ಕಾನೂನು ಎಂದು ಹೇಳಿದ್ದಾರೆ. ಇದಕ್ಕೆ ಪ್ರಧಾನಿಯವರ ಸಹಮತ ಇದೆಯೇ ಇಲ್ಲವೇ ಎಂಬುದನ್ನು ದೇಶದ ಜನರ ಮುಂದೆ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿರದೆ ಇದ್ದರೆ ಭಾರತ ಏನಾಗಿರುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಕಲ್ಪಿಸಿಕೊಂಡರೆ ನಮ್ಮೆಲ್ಲರ ಬದುಕಿನಲ್ಲಿ ಅವರ ಪಾತ್ರದ ಅರಿವಾಗಬಹುದು. ಈ ಕಾರಣಕ್ಕಾಗಿ ಜಾತಿ, ಧರ್ಮ, ಪಂಥ, ಪ್ರದೇಶವನ್ನು ಮೀರಿ ಭಾರತದ ನೆಲದಲ್ಲಿ ಹುಟ್ಟಿದವರು ಮತ್ತು ಹುಟ್ಟಲಿರುವವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಋಣಿಗಳಾಗಿರಬೇಕು ಎಂದು ಸಲಹೆ ನೀಡಿದ್ದಾರೆ.