ರಾಜ್ಯದ ಹಲವೆಡೆ ಇಂದು ಮಳೆ ಸಾಧ್ಯತೆ

ಬೆಂಗಳೂರು, ನ.15- ಈಶಾನ್ಯ ಮುಂಗಾರು ಚುರುಕಾಗಿದ್ದು, ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಮೋಡ ಕವಿದ ವಾತಾವರಣವಿದ್ದು, ತಂಪಾದ ಮೇಲ್ಮೈ ಗಾಳಿ ಬೀಸುತ್ತಿದೆ. ಇದರಿಂದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಆದರೆ, ನ.18ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿದ್ದು, ನ.18ರಂದು ತಮಿಳುನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಸಂಭವವಿದೆ.

ಅದರ ಪರಿಣಾಮ ರಾಜ್ಯದ ಮೇಲೂ ಉಂಟಾಗಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ನ.18ರಿಂದ 21ರ ವರೆಗೂ ರಾಜ್ಯದಲ್ಲಿ ಮಳೆಯಾಗಲಿದೆ. ಆದರೆ, ಇಂದು ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಹೆಚ್ಚಿನ ಪ್ರಮಾಣದ ಮಳೆ ಇಂದು ಮತ್ತು ನಾಳೆ ಇರುವುದಿಲ್ಲ. ಆದರೆ, ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಮುಂಗಾರು ಹಂಗಾಮಿನ ರಾಗಿ, ಭತ್ತ, ಹಲಸಂದೆ, ಉದ್ದು, ಹೆಸರು ಸೇರಿದಂತೆ ವಿವಿಧ ಬೆಳೆಗಳ ಕೊಯ್ಲು ಮಾಡುವ ಅವ ಇದಾಗಿದ್ದು, ಮಳೆ ಬಂದರೆ ಫಸಲು ಹಾಳಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.

ಭಾರೀ ಪ್ರಮಾಣದ ಮಳೆ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆದ ಬೆಳೆ ಮಳೆಯಲ್ಲಿ ಕೊಚ್ಚಿಹೋಗಲಿದೆ. ಹೀಗಾಗಿ ರೈತರು ಆತಂಕದಲ್ಲೇ ಬೆಳೆ ಕೊಯ್ಲು ಮಾಡತೊಡಗಿದ್ದಾರೆ.

Sri Raghav

Admin