ರಾಮನಗರ,ಮಾ.28- ಕಾಂಗ್ರೆಸ್ ಪಕ್ಷಕ್ಕೆ ಹೆದರಿಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ರಾಮನಗರದಲ್ಲಿಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ರವರ ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್
ಪಕ್ಷಗಳು ಅವರೊಂದು ತೀರ, ಇವರೊಂದು ತೀರ ಎಂಬಂತೆ ರಾಜಕಾರಣ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಹೆದರಿಕೊಂಡು ಒಟ್ಟಾಗಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ಬಡವರ ಪರ ಕಾರ್ಯಕ್ರಮಗಳನ್ನು ರಾಜ್ಯದ ಜನ ಒಪ್ಪಿಕೊಂಡಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ನಮಗೇ ಆಶೀರ್ವಾದ ಮಾಡುತ್ತಾರೆ. ಬಿಜೆಪಿಯವರು 28 ಕ್ಷೇತ್ರಗಳನ್ನೂ ಗೆದ್ದುಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಗೆಲ್ಲಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇರಲಿಲ್ಲ. ಈ ಬಾರಿ ನಮ್ಮ ಸರ್ಕಾರ ಇದೆ. 5 ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದ್ದೇವೆ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಮೂರು ಬಾರಿ ಸಂಸದರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಜನರ ನಡುವೆ ಇದ್ದಾರೆ. ಕ್ರಿಯಾಶೀಲವಾಗಿ ಸಂಸತ್ನ ಒಳಗೆ, ಹೊರಗೆ ಕೆಲಸ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಸರ್ಕಾರಿ ಸೇವೆಯಲ್ಲಿದ್ದವರು. ಬಿಜೆಪಿಯವರು ಅವರನ್ನು ರಾಜಕೀಯಕ್ಕೆ ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜನರ ಜೊತೆ ನಿರಂತರವಾದ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.