ಬೆಳಗಾವಿ,ಡಿ.11- ಬಿಜೆಪಿ, ಜೆಡಿಎಸ್ನವರು ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭ್ರಮಾಲೋಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನೀರಿನಿಂದ ಹೊರಬಂದ ಮೀನಿನಂತೆ ಅವರು ಭ್ರಮಾಲೋಕದಲ್ಲಿ ಒದ್ದಾಡುತ್ತಿದ್ದಾರೆ. ನೀರಿನಿಂದ ತೆಗೆದ ಮೀನು ವಿಲವಿಲ ಒದ್ದಾಡು ವಂತೆ ಪ್ರತಿಪಕ್ಷಗಳು ಒದ್ದಾಡುತ್ತಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮೇ ನಂತರ ರಾಜ್ಯಸರ್ಕಾರ ಪತನವಾಗಲಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಕೇಳಲಾದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.ಬಿಜೆಪಿಯಲ್ಲಿ ಸಮನ್ವಯ ಮೂಡಲು ಸಾಧ್ಯವೇ ಇಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದವರು. ಅಧಿಕಾರ ಹೋದ ಮೇಲೆ ಅವರಲ್ಲಿ ಒಗ್ಗಟ್ಟು ಉಳಿದಿಲ್ಲ ಎಂದು ಟೀಕಿಸಿದರು.
ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಈಗ ಅವರಲ್ಲಿ ಎರಡು, ಮೂರು ಗುಂಪುಗಳಿವೆ. ಅವರಲ್ಲಿ ಸಮನ್ವಯ ಮೂಡಲು ಸಾಧ್ಯವಿಲ್ಲ ಎಂದು ಆರೋಪಿಸಿದರು.ವಿಧಾನಮಂಡಲದ ಅವೇಶನದಲ್ಲಿ ಪ್ರತಿಪಕ್ಷಗಳು ಮಾಡುವ ಯಾವುದೇ ವಿಚಾರದ ಹಾಗೂ ಸಮಸ್ಯೆಯ ಚರ್ಚೆಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಸರ್ಕಾರ ವಿಳಂಬ ಮಾಡುವುದಾಗಲೀ, ಕಾಲಾಹರಣ ಮಾಡುವುದಾಗಲೀ ಮಾಡುತ್ತಿಲ್ಲ. ಬರಗಾಲ ಕುರಿತಂತೆ ಚರ್ಚೆ ನಡೆದಿದ್ದು, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ. ನಾಳೆಯಿಂದ ಉತ್ತರ ಕರ್ನಾಟಕದ ವಿಷಯದ ಚರ್ಚೆಯಾಗಲಿದೆ. ಅದಕ್ಕೂ ಉತ್ತರ ಕೊಡುತ್ತೇವೆ ಎಂದರು.
ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆ ಏರಿಕೆ
ವಿಧಾನಸಭೆಯಲ್ಲಿ ವೀರ ಸಾವರ್ಕರ್ ಫೋಟೊ ತೆಗೆಯುವ ವಿಚಾರ ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ್ದು. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.ಚಳಿಗಾಲದ ಅವೇಶನ ಮುಗಿದ ಬಳಿಕ ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ:
ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೇ ತಪ್ಪೆಸಗಿದರೂ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.