ಬೆಂಗಳೂರು, ಜೂ.29- ಸಿದ್ದರಾಮಯ್ಯ ಅವರೇ ಡಿಕೆಶಿ ಜೊತೆ ವೈಮನಸ್ಸಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಪರಿಹರಿಸಿಕೊಳ್ಳಿ. ಸ್ವಾಮೀಜಿಗಳ ಬಗ್ಗೆ ಅಗೌರವದಿಂದ ಮಾತನಾಡಿದರೆ ನಿಮಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವಂತೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮನವಿ ಮಾಡಿದ ಬೆನ್ನಲ್ಲೇ ವ್ಯಕ್ತಿಯೊಬ್ಬರೊಂದಿಗೆ ಸಿದ್ದರಾಮಯ್ಯ ಅವರು ನಡೆಸಿರುವ ಮಾತುಕತೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ಆಡಿರುವ ಮಾತುಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇಸರಿ, ಕುಂಕುಮ ಕಂಡರೆ ದ್ವೇಷ ಕಾರುವ ಸಿಎಂ ಸಿದ್ದರಾಮಯ್ಯನವರು ಈಗ ಒಕ್ಕಲಿಗ ಸ್ವಾಮೀಜಿಗಳ ವಿರುದ್ಧ ಏಕವಚನ ಪ್ರಯೋಗ ಮಾಡಿ ನಿಂದಿಸುವ ಮೂಲಕ ಮತ್ತೊಮ್ಮೆ ತಮ್ಮ ಹಿಂದೂ ವಿರೋಧಿ ಧೋರಣೆ ಪ್ರದರ್ಶನ ಮಾಡಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ನಿಮ್ಮ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಯವಿದ್ದರೆ ಅದನ್ನ ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪರಿಹರಿಸಿಕೊಳ್ಳಿ. ಅದು ಬಿಟ್ಟು, ಸ್ವಾಮೀಜಿಗಳು ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಈ ರೀತಿ ಅಗೌರವದಿಂದ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ. ಒಕ್ಕಲಿಗ ಸಮುದಾಯ ಇದನ್ನು ತೀವ್ರವಾಗಿ ಖಂಡನೆ ಮಾಡುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದು ಪ್ಟೋ್‌ನಲ್ಲಿ ಗೃಹ ಸಚಿವ ಪರಮೇಶ್ವರ್ ವಿರುದ್ಧವೂ ಕಿಡಿಕಾರಿದ್ದಾರೆ. ದಿಕ್ಕು ದೆಸೆಯಿಲ್ಲದ ನೀತಿಗಳಿಂದ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರದ ಬಳಿ ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ದುಡ್ಡಿಲ್ಲ. ಹುಬ್ಬಳ್ಳಿಯಲ್ಲಿ ಕೊಲೆಗೀಡಾಗಿದ್ದ ಅಂಜಲಿ ಅಂಬಿಗೇರ ಮನೆಗೆ ಮೇ 20 ರಂದು ಡಾ. ಪರಮೇಶ್ವರ್ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದರು. ಚುನಾವಣೆ ನೀತಿ ಸಂಹಿತೆ ಮುಗಿದು ತಿಂಗಳು ಕಳೆಯುತ್ತಾ ಬಂದರೂ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಮಾತು ಮರೆತು ಹೋಗಿದೆ.
ಬಣ್ಣ ಬಣ್ಣದ ಕಾಗೆ ಹಾರಿಸಿ ಜನರಿಗೆ ಟೋಪಿ ಹಾಕುವುದು, ವಿಶ್ವಾಸ ದೋಹ ಬಗೆಯುವುದೇ ಸಿದ್ದರಾಮಯ್ಯನವರ ಸರ್ಕಾರ ಕೊಡುವ ಗ್ಯಾರಂಟಿ. ಮೊದಲೇ ನೀಚಕೃತ್ಯದಿಂದ ನೊಂದಿರುವ ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ನೀಡದಷ್ಟು ದಯನೀಯ ಸ್ಥಿತಿಗೆ ಸರ್ಕಾರ ತಲುಪಿರುವುದು ಕನ್ನಡಿಗರ ದೌರ್ಭಾಗ್ಯ ಎಂದು ಕಿಡಿಕಾರಿದ್ದಾರೆ.
ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ಪ್ಟೋ್ ಮಾಡಿದ್ದು, ಸರ್ಕಾರದ ಕುರಿತು ವ್ಯಂಗ್ಯವಾಡಿದೆ. ಇಂಧನ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಇದೀಗ ಹೊಸ ಸಂಶೋಧನೆಗೆ ಇಳಿದಿದ್ದಾರೆ. 25 ಸಾವಿರ ಎಕರೆ ಸಾರ್ವಜನಿಕ ಆಸ್ತಿ ಅಡವಿಡಲು ಆಳ ಅಧ್ಯಯನ ನಡೆಸಿದ ಕಾಂಗ್ರೆಸ್ ಸರ್ಕಾರವೀಗ, ಬಸ್ ಪ್ರಯಾಣ ದರ ಸೇರಿ ಬೆಲೆ ಏರಿಕೆಗೆ ಇನ್ನೇನಾದರೂ ಉಳಿದಿದೆಯಾ? ಅಂತ ದುರ್ಬಿನ್ ಹಾಕಿಕೊಂಡು ಶೋಧನೆಯಲ್ಲಿ ತೊಡಗಿದೆ.
ಕಾಂಗ್ರೆಸ್ ಅಂದ್ರೆ ಜನರ ಜೇಬಿಗೆ ಕತ್ತರಿ ಖಚಿತ. ಕರುನಾಡು ದಿವಾಳಿ ಖಂಡಿತ. ಹಾಗೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ದಂಗೆ ಏಳುವುದೂ ನಿಶ್ಚಿತ ಎಂದು ಲೇವಡಿ ಮಾಡಿದೆ.