ಮೈಸೂರು,ಏ.1- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ ವಾಗಿದೆ. ಸುಳ್ಳಿನ ಕನಸುಗಳ ಪಿಚ್ಚರ್ ಬಾಕಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಈಗಿನದು ಟ್ರೈಲರ್ ಮಾತ್ರ. ಪಿಚ್ಚರ್ ಇನ್ನು ಬಾಕಿ ಇದೆ ಎಂದು ಪ್ರಧಾನಮಂತ್ರಿ ನೀಡಿರುವ ಹೇಳಿಕೆಗೆ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಅಭಿವೃದ್ಧಿ ಆಗಿದ್ದರಲ್ಲವೇ ಟ್ರೈಲರ್ ಇರುವುದು. ಅಭಿವೃದ್ಧಿ ಶೂನ್ಯವಾಗಿದೆ. ಪ್ರಧಾನಿಗಳು ಈವರೆಗೂ ಬರೀ ಸುಳ್ಳನ್ನೇ ಹೇಳಿಕೊಂಡು ಬಂದಿದ್ದಾರೆ. ಅದರ ಪಿಕ್ಚರ್ ಬಾಕಿ ಇದೆ. ಸಮೀಕ್ಷೆಯ ಪ್ರಕಾರ NDA 200 ಸ್ಥಾನಗಳನ್ನು ದಾಟುವುದಿಲ್ಲ.ಅದಕ್ಕಾಗಿ 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ ಎಂದರು.
ಜನ ದಡ್ಡರಲ್ಲ. ಇವರ ಮಾತುಗಳಿಗೆ ಮರಳಾಗುವುದಿಲ್ಲ. ಎಲ್ಲವನ್ನು ಗಮನಿಸುತ್ತಿರುತ್ತಾರೆ ಎಂದ ಅವರು, ರಾಜ್ಯದಲ್ಲೂ ಬಿಜೆಪಿ ನಾಯಕರು ಸೋಲಿನ ಭಯದಿಂದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ವೈಫಲ್ಯ, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ನಡೆಸುತ್ತೇವೆ ಎಂದರು.
2014ರಲ್ಲಿ ಪೆಟ್ರೋಲ್, ಡೀಸೆಲ್ , ಗ್ಯಾಸ್ ಬೆಲೆ ಎಷ್ಟಿತ್ತು. ಆಗ ಪ್ರಚಾರ ನಡೆಸಿದ್ದ ನರೇಂದ್ರಮೋದಿ ಅವರು ಇದೆಲ್ಲದರ ಬೆಲೆ ಕಡಿಮೆ ಮಾಡುವುದಾಗಿ ಹೇಳಿದ್ದರು. ಅಚ್ಚೇ ದಿನ್ ಬಂದಿದೆಯೇ? ಚುನಾವಣೆಯ ಕಾಲಘಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು 2 ರೂ. ಗ್ಯಾಸ್ ಬೆಲೆಯನ್ನು 100 ರೂ. ಕಡಿಮೆ ಮಾಡಿದ್ದಾರೆ. ಕಳೆದ 10 ವರ್ಷಗಳಿಂದಲೂ ಎಷ್ಟು ಹೆಚ್ಚಾಗಿದೆ ಎಂದು ಜನರಿಗೆ ಗೊತ್ತಿದೆ. ಈಗ ಕಡಿಮೆ ಮಾಡಿದ ಹೊರತಾಗಿಯೂ ಇವುಗಳ ಬೆಲೆ ದುಬಾರಿಯಾಗಿಯೇ ಇದೆ ಎಂದರು.
2014ರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 47 ರೂ. ಇತ್ತು. ಈಗ 96 ರೂ. ಇದೆ. ಪೆಟ್ರೋಲ್ 71 ರೂ.ನಿಂದ 102 ರೂ.ಗಳಿಗೆ ಹೆಚ್ಚಿದ್ದರೆ, ಗ್ಯಾಸ್ ಬೆಲೆ 1100 ರೂ.ಗಳಿಗೆ ಹೆಚ್ಚಾಗಿತ್ತು. 200 ರೂ. ಕಡಿಮೆ ಮಾಡಿ ಈಗ 900 ರೂ. ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದರೆ ಮಾತ್ರ ದರ ಏರಿಸಬಹುದು. ಆದರೆ ಈಗ 2014ಕ್ಕಿಂತಲೂ ಕಡಿಮೆ ಕಚ್ಚಾ ತೈಲದ ಬೆಲೆ ಇದೆ. ಆದರೂ ದರ ಏರಿಕೆ ಏಕೆ ಎಂದು ಪ್ರಶ್ನಿಸಿದರು.
ತಮ್ಮ ಪುತ್ರ ಯತೀಂದ್ರ ಸಿಬಿಐ ನ್ಯಾಯಾಲಯಕ್ಕೆ ಅಮಿತ್ ಷಾ ವಿರುದ್ಧ ಸಲ್ಲಿಸಿದ್ದ ವರದಿಯ ವಿಚಾರಗಳನ್ನಷ್ಟೇ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅಮಿತ್ ಷಾ ಅವರನ್ನು ಅಪಮಾನಗೊಳಿಸುವ ಉದ್ದೇಶವಿರಲಿಲ್ಲ. ಹಾಗಿದ್ದರೆ ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿದ್ದೇ ತಪ್ಪೇ? ಎಂದು ಪ್ರಶ್ನಿಸಿದರು. ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ತಾವು ಭೇಟಿ ಮಾಡುವುದಿಲ್ಲ. ಈವರೆಗೂ ಭೇಟಿ ಮಾಡಿಲ್ಲ. ಫೋನಿನಲ್ಲೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಸಿದ್ದಾಂತ ಮತ್ತು ನಾಯಕತ್ವ ಒಪ್ಪಿ ಬರುವ ಎಲ್ಲರಿಗೂ ಸ್ವಾಗತ ಇದೆ ಎಂದ ಸಿದ್ದರಾಮಯ್ಯ, ತಾವು ಮೈಸೂರು, ಚಾಮರಾಜನಗರ ಕ್ಷೇತ್ರಗಳಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳನ್ನು ಅಷ್ಟೇ ಗಂಭೀರವಾಗಿ ತೆಗೆದಕೊಂಡಿದ್ದೇನೆ. ನಾಳೆ ಚಿತ್ರದುರ್ಗ, ನಾಡಿದ್ದು, ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ನನಗೆ ಯಾವುದೇ ಗರ್ವವಿಲ್ಲ. ದೇವೇಗೌಡರು ಈ ಹಿಂದೆ ಮುಸ್ಲಿಮನಾಗಿ ಹುಟ್ಟುತ್ತೇನೆ, ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಹೇಳಿದರಲ್ಲದೆ ಅದನ್ನು ನೆನಪಿಸಿದ್ದೇನೆ. ಸತ್ಯ ಹೇಳುವುದು ಗರ್ವ ಅಲ್ಲ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಜೆಡಿಎಸ್ನವರು ಯಾವ ರೀತಿ ನಿಭಾಯಿಸಿದ್ದರು ಎಂಬುದು ಗೊತ್ತಿದೆ. ಮೇಲ್ಪಟ್ಟದಲ್ಲಿ ಹೊಂದಾಣಿಕೆಯಾದರೂ ಕೆಳಮಟ್ಟದಲ್ಲಿ ಜನ ಒಪ್ಪಿಕೊಳ್ಳುತ್ತಿಲ್ಲ. ಬಡವರಿಗೆ ಯಾವ ಪಕ್ಷವೂ ಇಲ್ಲ. ಹಸಿವು ನೀಗಿಸುವುದಷ್ಟೇ ಆದ್ಯತೆಯಾಗಬೇಕು ಎಂದರು.