ಬೆಂಗಳೂರು, ಸೆ.26- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಸೂಚಿಸಿರುವಂತೆ ಸಿಆರ್‌ಪಿಸಿ ಅಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಜಾರಿಯಲ್ಲಿರುವ ಬಿಎನ್‌ಎಸ್‌ಎಸ್ ನಿಯಮಗಳ ಅಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಸಿಆರ್‌ಪಿಸಿ 156/3ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ಈಗ ಸಿಆರ್‌ಪಿಸಿ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಿದರು. ಬಿಎನ್‌ಎಸ್‌ಎಸ್ ನಿಯಮಗಳು 2024ರ ಜುಲೈ 1 ರಿಂದಲೂ ಚಾಲ್ತಿಯಲ್ಲಿದೆ. ಅದರ ಅಡಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶವಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸಿ ಯಾವ ರೀತಿಯ ವರದಿ ನೀಡಲಿದೆ ಎಂದು ಕಾಯುತ್ತಿದ್ದೇವೆ. ವರದಿಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಸೇರಿ ಬೇರೆ ಬೇರೆ ಹಂತಗಳಲ್ಲಿ ಪ್ರಶ್ನಿಸಲು ಅವಕಾಶ ಇದೆ ಎಂದು ಹೇಳಿದರು. ಬಿಜೆಪಿಯವರು ಟೀಕೆಗಳು ಹಾಗೂ ರಾಜೀನಾಮೆಯ ಒತ್ತಡಗಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ದೇಶದಲ್ಲಿ ಕಾನೂನು ಎಂಬುದು ಅಸ್ತಿತ್ವದಲ್ಲಿದೆ.
ಯಾರು ಏನೇ ಹೇಳಿದರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಬಿಜೆಪಿಯವರು ಹೇಳಿದಾಕ್ಷಣ ಅದೇ ರೀತಿ ಮಾಡಲಾಗುವುದಿಲ್ಲ. ಯಾರೆ ಏನೇ ಅಭಿಪ್ರಾಯ ಹೇಳಿದರೂ ಕಾನೂನು ಮೀರಿ ಜರುಗುವುದಿಲ್ಲ. ವಿರೋಧಪಕ್ಷವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುವುದು, ರಾಜೀನಾಮೆಗೆ ಒತ್ತಾಯಿಸುವುದು ಅವರ ಕರ್ತವ್ಯ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ ಎಂದರು.
ಹೈಕೋರ್ಟ್‌ನ ತೀರ್ಪಿನಿಂದ ನಮಗೆ ಸಮಾಧಾನವಾಗಿಲ್ಲ. ನಾವು ನೀಡಿದ ಸಾಕ್ಷ್ಯಗಳು, ಪುರಾವೆಗಳನ್ನು ತೀರ್ಪು ನೀಡುವ ವೇಳೆ ಪರಿಗಣಿಸಲಾಗಿಲ್ಲ. ಹೀಗಾಗಿ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿನಿತ್ಯ ಕ್ಷುಲ್ಲಕ ವಿಚಾರಗಳಿಗೂ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದರೆ, ಎಲ್ಲದ್ದಕ್ಕೂ ಉತ್ತರ ನೀಡಲು ಸಾಧ್ಯವಿಲ್ಲ. ಸಾಂವಿಧಾನಿಕ ಬಾಧ್ಯತೆಯನ್ನು ಹೊಂದಿರುವ ರಾಜ್ಯಪಾಲರು ಪ್ರಸ್ತಾಪಿಸುವ ಗಂಭೀರ ವಿಚಾರಗಳಿಗೆ ಸರ್ಕಾರ ಪ್ರತಿಕ್ರಿಯಿಸಲಿದೆ ಎಂದು ಹೇಳಿದರು.