ಬೆಂಗಳೂರು,ಸೆ.25- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜೀನಾಮೆಗೆ ಒತ್ತಾಯಿಸಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾಗಿದೆ.
ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಎಫ್‌ಐಆರ್ ರದ್ದುಪಡಿಸುವುದಿಲ್ಲ ಎಂದು ಆದೇಶ ನೀಡಿತ್ತು. ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಮುಕ್ತ ಮತ್ತು ನಿಕ್ಷಪಾತ ತನಿಖೆ ನಡೆಯಬೇಕಾದರೆ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ ಯಾವ ನೈತಿಕತೆ ಮೇಲೆ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಅವರು ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಲಿ.
ಮುಖ್ಯಮಂತ್ರಿಯಾಗಿ ಅವರನ್ನು ತನಿಖಾಧಿಕಾರಿಗಳು ಹೇಗೆ ವಿಚಾರಣೆಗೊಳಪಡಿಸುತ್ತಾರೆ. ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಈಗ ಸಿದ್ದರಾಮಯ್ಯನವರು ಆಡಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದ್ದು, ಸಿದ್ದರಾಮಯ್ಯನವರೇ ನೀವು ರಾಜೀನಾಮೆ ಕೊಡುವುದು ಯಾವಾಗ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ನೀವು ಮೊದಲು ನಿಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾತನಾಡಿ. ಹೈಕೋರ್ಟ್ ನಿಮ ಅರ್ಜಿಯನ್ನು ವಜಾಗೊಳಿಸಿ ತನಿಖೆ ನಡೆಯಬೇಕೆಂದು ಹೇಳಿದೆ. ನೀವು ಅಧಿಕಾರದಲ್ಲಿದ್ದರೆ ಮುಕ್ತ ಮತ್ತು ನ್ಯಾಯಸಮತ ತನಿಖೆ ಸಾಧ್ಯವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದರೂ ಅಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸರ್ಕಾರದ ಅಣತಿ ಮೇರೆಗೆ ಕೆಲಸ ಮಾಡುತ್ತಾರೆ. ನೀವು ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದಕ್ಕೆ ಗ್ಯಾರಂಟಿಯಾದರೂ ಏನು? ಅಂದು ಯಡಿಯೂರಪ್ಪ ಅವರ ನೈತಿಕತೆ ಪ್ರಶ್ನಿಸಿದ ನಿಮಗೆ ಅದೇ ನೈತಿಕತೆ ಅನ್ವಯವಾಗುವುದಿಲ್ಲವೇ? ಎಂಬುದು ಅನೇಕರ ಪ್ರಶ್ನೆಯಾಗಿದೆ.