ಹಳ್ಳಿಗಳಲ್ಲಿ ಊರಹಬ್ಬ, ಜಾತ್ರೆಗಳು ಎಂದರೆ ಸಿಂಹಪಾಲು ದೇವಿಗಳ ಆರಾಧನೆಗೆ ಮೀಸಲಾಗಿಡಲಾಗುತ್ತದೆ. ಆಕೆಯ ಮಹತ್ವವನ್ನು ಅನಾದಿ ಕಾಲದಿಂದಲೂ ಬೆಳ್ಳಿ ಪರದೆಯ ಮೇಲು ವಿವಿಧ ಕಥಾ ಹಿನ್ನೆಲೆಯಲ್ಲಿ ಕಣ್ತುಂಬಿಕೊಂಡಿದ್ದೇವೆ. ಆದರೆ ಈ ವಾರ ತೆರೆಕಂಡು ಪ್ರೇಕ್ಷಕರನ್ನ ರಂಜಿಸುತ್ತಿರುವ ಸಿಂಹರೂಪಿಣಿ ಚಿತ್ರದ ಸ್ಕ್ರೀನ್ ಪ್ಲೇ ಹೊಸತನಕ್ಕೆ ನಾಂದಿ ಹಾಡಿದೆ. ಕೆಜಿಎಫ್ ಚಿತ್ರಕ್ಕೆ ಹಾಡು ಬರೆದು ಮನೆಮಾತಾದ ಕಿನಾಳ್ ರಾಜ್, ನಾನು ಬರೀ ಚಿತ್ರ ಸಾಹಿತ್ಯ ಅಲ್ಲ ನನ್ನಲ್ಲೂ ಒಬ್ಬ ಉತ್ತಮ ನಿರ್ದೇಶಕನಿದ್ದಾನೆ ಎಂದು ಈ ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ.
ಮಾರಮ್ಮ ದೇವಿ ಇವತ್ತಿಗೂ ಊರಿನ ರಕ್ಷಣೆಗೆ ನಿಂತಿದ್ದಾಳೆ, ಆಕೆ ನೆಲೆಸಿದ ಕ್ಷೇತ್ರದಲ್ಲಿ ಯಾವುದೇ ದುಷ್ಟ ಶಕ್ತಿಗಳ ಆಟ ನಡೆಯುವುದಿಲ್ಲ ಎನ್ನುವ ಅಂಶಗಳ ಮೇಲೆ ನದೇಶಕರು ಕಥೆಯನ್ನ ಹೆಣೆದು ಉತ್ತಮ ಪ್ರಯತ್ನ ಮಾಡಿದ್ದಾರೆ. ಆಕೆಯ ಪವಾಡಗಳನ್ನು ಜನ ನಂಬುತ್ತಾರೆ.ನಂಬದೆ ಆಕೆಯ ವಿರುದ್ಧವೇ ನಿಂತು, ದೇವಿಯೇ ಸುಳ್ಳು ಎಂದು ಅವಳನ್ನೇ ದಿಗ್ಬಂಧನ ಮಾಡಿ ಮೆರೆಯಲು ಹೋದ ದುಷ್ಟಮಾನವರ ಗತಿ ಏನಾಗುತ್ತದೆ ಎಂಬುವುದಕ್ಕೆ ಉತ್ತರ ಕೊಡಲಾಗಿದೆ.
ಎಷ್ಟೇ ತಂತ್ರಜ್ಞಾನ ಬೆಳೆದರು, ನಮ್ಮ ಮೂಲ ಬೇರು ಹಳ್ಳಿಗಳಲ್ಲಿನ ಸಂಪ್ರದಾಯಗಳು, ನಂಬಿಕೆಗಳು ಇಂದಿಗೂ ತಮ್ಮ ಮೌಲ್ಯಗಳನ್ನು ಕಳೆದುಕೊಂಡಿಲ್ಲ ಅವು ಎಂದೆಂದಿಗೂ ಪ್ರಸ್ತುತ. ದೈವೀಶಕ್ತಿಯ ಕುರಿತು ಯಾರೂ ಪ್ರಶ್ನಿಸುವಂತಿಲ್ಲ ಎಂದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಸಿಂಹರೂಪಿಣಿಯಲ್ಲಿ ಆಗಿದೆ. ಮಳೆ ಬರಲು ಊರ ಮಾರಮ್ಮನಿಗೆ ತಂಗಳು ಮುದ್ದೆ ನೈವೇದ್ಯವಿಟ್ಟರೆ ಅದು ಫಲಿಸುತ್ತದೆ ಅನ್ನುವ ನಂಬಿಕೆಯ ಅನೇಕ ಉದಾಹರಣೆಗಳನ್ನು ಕೊಟ್ಟು ಕಥಾ ನಿರೂಪಣೆಗೆ ಪುಷ್ಟಿ ನೀಡಿಲಾಗಿದೆ.
ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಮಾರಮ್ಮ ದೇವಿಗೂ ಮತ್ತು ಕೋಣಕ್ಕೆ ಇರುವ ಸಂಬಂಧ. ಇದು ಎರಡನೆಯ ಭಾಗವನ್ನು ಆವರಿಸಿಕೊಂಡು ತುಂಬಾ ಇಂಟರೆಸ್ಟಿಂಗ್ ಆಗಿ ಪ್ರೇಕ್ಷಕರನ್ನ ಸೀಟಿನ ತುದಿಯಲ್ಲಿ ನಿಲ್ಲಿಸುತ್ತದೆ. ಸಿಂಹರೂಪಿಣಿ ಚಿತ್ರದಲ್ಲಿ ಭಕ್ತಿ ಪ್ರಧಾನವಾಗಿದ್ದರು ಮಧುರವಾದ ಪ್ರೀತಿ,ಅಲ್ಲಲಿ ನಿರ್ದೇಶಕರು ಇಡುವ ಕಾಮಿಡಿ ಕಚಗುಳಿ, ಅಕ್ಷನ್ ಎಪಿಸೋಡ್, ಸಾಹಿತ್ಯದೊಂದಿಗೆ ಹದವಾಗಿ ಮಿಳಿತವಾಗಿರುವ ಸಂಗೀತ ಕಥೆಗೆ ಪುಷ್ಟಿ ನೀಡಿವೆ. ಇದಕ್ಕೆ ಸಂಗೀತ ನಿರ್ದೇಶಕ ಆಕಾಶ ಪರ್ವ ಶ್ರಮಪಟ್ಟಿದ್ದಾರೆ. ಹಾಗೆಯೇ ಕಥೆಯನ್ನು ಬರೆದು ನಿರ್ಮಾಣ ಮಾಡಿರುವ ಕೆ.ಎಮ್ ನಂಜುಂಡೇಶ್ವರ ಧೈರ್ಯ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ
ಚಿತ್ರದಲ್ಲಿ ಬಹುಭಾಷ ನಟ ಸುಮನ್, ಅಂಕಿತ ಗೌಡ, ಯಶಸ್ವಿನಿ ಸುಬ್ಬೆಗೌಡ, ಹರೀಶ್, ದಿವ್ಯ ಆಲೂರ್, ತಬಲ ನಾಣಿ ಸೇರಿದಂತೆ ಅನೇಕ ನಟರ ನಟನ ಸಾಮರ್ಥ್ಯ ಸಮರ್ಪಕವಾಗಿ ಬಳಕೆಯಾಗಿದೆ. ಭಕ್ತಿ ಪ್ರಧಾನ ಕಥೆಗೆ ಕಮರ್ಷಿಯಲ್ ಲೇಪನ ಹಚ್ಚಿ, ಯೋಚಿಸಲು ಸಮಯ ಕೊಡದೆ ವೇಗವಾಗಿ ಸ್ಕ್ರೀನ್ ಪ್ಲೇ ಓಡಿದಾಗ ಪ್ರೇಕ್ಷಕ ಇಷ್ಟಪಡುತ್ತಾನೆ ಎನ್ನುವುದಕ್ಕೆ ಸಿಂಹರೂಪಿಣಿ ಸಿನಿಮಾ ಸಾಕ್ಷಿಯಾಗುತ್ತದೆ