Monday, May 20, 2024
Homeಸಂಪಾದಕೀಯ-ಲೇಖನಗಳುದಾಹ ತೀರಿಸಿ, ಅನ್ನದಾತರ ಮನೆದೇವರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

ದಾಹ ತೀರಿಸಿ, ಅನ್ನದಾತರ ಮನೆದೇವರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಅದೊಂದು ದಿನ ಮಳೆಗಾಲದಲ್ಲಿ ಶರಾವತಿ ಜಲಾನಯನ ಪ್ರದೇಶದಲ್ಲಿ ಚೆನ್ನಾಗಿ ಮಳೆಬಿದ್ದು, ಶರಾವತಿ ನದಿಯು ತುಂಬಿ ಜೋಗ್ ಜಲಪಾತದಲ್ಲಿ ಭೋರ್ಗರೆಯುತ್ತಾ ರಾಜಾರಾಣಿ, ರೋರರ್, ರಾಕೆಟ್, ಅತ್ಯಂತ ರಮಣೀಯವಾಗಿ ಧುಮ್ಮಿಕ್ಕುತ್ತಿದ್ದುದು ಮೈಸೂರು ಅರಸರ ಕಿವಿಗೆ ಬಿದ್ದು ಅದನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ತಮ್ಮ ದಿವಾನರೊಂದಿಗೆ ಜೋಗ್ ಜಲಪಾತಕ್ಕೆ ಬಂದು ಆಹಾ ಅದ್ಭುತ..!! ಎಷ್ಟು ರಮಣೀಯವಾಗಿದೆ ಎಂದು ತಮ್ಮ ದಿವಾನರತ್ತ ಪ್ರತಿಕ್ರಿಯೆಗಾಗಿ ತಿರುಗಿದಾಗ ಅವರ ದಿವಾನರ ಬಾಯಿಯಿಂದ ಬಂದ ಮಾತು ಓ ಮೈ ಗಾಡ್..! ವಾಟ್ ಎ ವೇಸ್ಟ್ ಎಂಬುದನ್ನು ಕೇಳಿ ಆಶ್ಚರ್ಯ ಚಕಿತರಾಗಿದ್ದರಂತೆ.

ಆ ರೀತಿಯಾಗಿ ಸದಾಕಾಲವೂ ಜನರ ಬಗ್ಗೆ ಯೋಚನೆ ಮಾಡುತ್ತಾ ತಮ್ಮ ಜೀವಮಾನವಿಡೀ ಜನಸೇವೆಗೆ ಮುಡುಪಾಗಿಟ್ಟ ಶತಾಯುಷಿಗಳಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಅಂದಿನ ಕೋಲಾರ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ವಿಶ್ವವಿಖ್ಯಾತ ಗಿರಿಧಾಮವಾದ ನಂದಿಬೆಟ್ಟದ ತಟದಲ್ಲಿರುವ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿದ್ದ ಸಂಸ್ಕøತ ವಿದ್ವಾಂಸರಾಗಿದ್ದ ಶ್ರೀನಿವಾಸ ಶಾಸ್ತ್ರಿಗಳು ಮತ್ತು ವೆಂಕಟಲಕ್ಷಮ್ಮ ದಂಪತಿ ಸುಪುತ್ರನಾಗಿ ಶ್ರೀ ವಿಶ್ವೇಶ್ವರಯ್ಯನವರ ಜನನವಾಗುತ್ತದೆ.

ತಮ್ಮೂರಿನ ಹತ್ತಿರದಲ್ಲೇ ಇದ್ದ ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿದ್ದಾಗಲೇ ಅವರ ತಂದೆಯವರು ಅಕಾಲಿಕವಾಗಿ ಮರಣ ಹೊಂದುತ್ತಾರೆ. ಮನೆಯಲ್ಲಿದ್ದ ದಟ್ಟದಾರಿದ್ರ್ಯದ ಬದುಕಿನ ನಡುವೆಯೂ ವಿಧವೆಯಾದ ಅವರ ತಾಯಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತ ತಮ್ಮ ಮಗನನ್ನು ಸಾಕಲು ಪ್ರಯತ್ನಿಸುತ್ತಿರುತ್ತಾರೆ.

ಆ ಮಾತು ನಿಜ ಮಾಡಿದ ಮಹನೀಯ: ಅಂದೊಮ್ಮೆ ವಿಶ್ವೇಶ್ವರಯ್ಯನವರು ಅವರ ಗುರುಗಳ ಮನೆಗೆ ಹೋಗಿದ್ದಾಗ ಅವರಿಗೆ ಬಾಯಾರಿಕೆಯಾಗಿ ಗುರುಗಳ ಮನೆಯಲ್ಲಿ ಕುಡಿಯಲು ನೀರು ಕೇಳಿದಾಗ ಅದೇ ಸಮಯದಲ್ಲಿ ಬರಗಾಲದಿಂದಾಗಿ ಊರಿನ ಬಾವಿಗಳೆಲ್ಲಾ ಬತ್ತಿ ಹೋಗಿ ಬಲು ದೂರದಿಂದ ಕುಡಿಯಲು ನೀರನ್ನು ತಂದಿದ್ದ ಗುರುಗಳ ಮಡದಿಯು ಬಾಲಕ ವಿಶ್ವೇಶ್ವರಯ್ಯನವರಿಗೆ ಕುಡಿಯಲು ನೀರನ್ನು ಕೊಟ್ಟು, ಆ ಬಾಲಕ ನೀರು ಕುಡಿಯುತ್ತಿದ್ದಾಗ, ನೋಡಪ್ಪಾ ನೀನು ದೊಡ್ಡವನಾದ ಮೇಲೆ ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಗಳಿಸಿ ನಮ್ಮ ಊರಿನ ನೀರಿನ ಸಮಸ್ಯೆಯನ್ನು ಪರಿಹಾರ ಮಾಡುತ್ತೀಯಾ? ಎಂದು ಕೇಳಿರುತ್ತಾರೆ.

ಅವರು ಕೇಳಿದ ಪ್ರಶ್ನೆಯನ್ನು ಸರಿಯಾಗಿ ಅರಿಯದಿದ್ದರೂ ಸಹ ಸಣ್ಣ ವಯಸ್ಸಿನ ವಿಶ್ವೇಶ್ವರಯ್ಯನವರು ಸರಿ ನಿಮ್ಮ ಬಾಯಿ ಹರಕೆಯಂತೆ ಹಾಗೇ ಆಗಲಿ ಎಂದು ಮಾತುಕೊಟ್ಟು ಬಂದಿರುತ್ತಾರೆ. ಮುಂದೊಂದು ದಿನ ಅವರು ಕರುನಾಡಿನ ಸಾಕಷ್ಟು ಹಳ್ಳಿಗಳಿಗೆ ಅವರು ಕಟ್ಟಿದ ಡ್ಯಾಮ್ಗಳು ನೀರು ಕೊಟ್ಟು ದಾಹ ನೀಗಿಸುತ್ತವೆ ಎಂದು ಯಾರೂ ಊಹಿಸಿರಲಿಲ್ಲ.

ಓದಿಗೆ ಶಕ್ತಿ ತುಂಬಿದ ನಡಿಗೆಯದು: ಬುದ್ಧಿವಂತ ವಿಶ್ವೇಶ್ವರಯ್ಯನವರ ವಿದ್ಯಾಭ್ಯಾಸಕ್ಕೆ ಊರಿನಲ್ಲಿ ಕಷ್ಟವಾದಾಗ, ಬೆಂಗಳೂರಿನಲ್ಲಿದ್ದ ಅವರ ಸೋದರ ಮಾವ ಎಚ್.ರಾಮಯ್ಯನವರ ಮನೆಗೆ ಬಂದ ವಿಶ್ವೇಶ್ವರಯ್ಯನವರು ವೆಸ್ಲಿ ಮಿಷನ್ ಹೈಸ್ಕೂಲ್ ಸೇರಿಕೊಳ್ಳುವುದಲ್ಲದೆ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿಲ್ಲದಿದ್ದ ಅವರ ಮಾವನವರಿಗೆ ಹೊರೆಯಾಗದಿರಲೆಂದು ವಾರಾನ್ನದ ಮೂಲಕ ತಮ್ಮ ದೈನಂದಿನ ಹಸಿವು ನೀಗಿಸಿಕೊಳ್ಳುತ್ತಾರೆ.

ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಣಕಟ್ಟಲು ಹೇಳಿದಾಗ ಅಷ್ಟೊಂದು ಹಣವನ್ನು ಮಾವನ ಬಳಿ ಕೇಳಲು ಸಂಕೋಚಪಟ್ಟ ವಿಶ್ವೇಶ್ವರಯ್ಯನವರು ಬೆಂಗಳೂರಿನ ತಮ್ಮ ಶಾಲೆಯಿಂದ 60 ಕಿಮೀ ದೂರವಿರುವ ಮುದ್ದೇನಹಳ್ಳಿಗೆ ಕಾಲಿಗೆ ಚಪ್ಪಲಿಯೂ ಇಲ್ಲದೆ ಬರಿಗಾಲಿನಲ್ಲಿ ನಡೆದುಕೊಂಡೇ ಮಧ್ಯರಾತ್ರಿಯ ಸಮಯಕ್ಕೆ ತಮ್ಮ ಚಿಕ್ಕದಾದ ಮುರುಕಲು ಮನೆಗೆ ಬಂದಾಗ, ಆಶ್ಚರ್ಯಚಕಿತಳಾದ ತಾಯಿ ಇದೇನಪ್ಪಾ ಇಷ್ಟು ಹೊತ್ತಿನಲ್ಲಿ ಬಂದಿದ್ದೀಯ ಎಂದು ವಿಚಾರಿಸಿದ್ದಾರೆ.

ಅಮ್ಮ ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ 12 ರೂ. ಫೀಸ್ ಕಟ್ಟಬೇಕು, ಇಲ್ಲದಿದ್ದರೆ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎನ್ನುತ್ತಾರೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ಹತಾಶಳಾಗಿದ್ದ ತಾಯಿ ಅಷ್ಟು ತಡರಾತ್ರಿಯಲ್ಲಿಯೇ ತಮ್ಮ ನೆರೆಮನೆಯ ಸದ್ಗುಣಿಗಳು ಮತ್ತು ಉದಾರಿಗಳಾಗಿದ್ದ ಶೆಟ್ಟರ ಬಳಿ ವಿಚಾರ ತಿಳಿಸಿ 15 ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದು ಮಗನ ಕೈಗೆ ಕೊಡುತ್ತಾರೆ.

ಕೆಲಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಸ್ನಾನ ಮುಗಿಸಿ, ತಾಯಿಕೊಟ್ಟ ಉಪಹಾರ ಸೇವಿಸಿ ಮತ್ತೆ ಬೆಳ್ಳಂಬೆಳಿಗ್ಗೆಯೇ ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಹಣದೊಂದಿಗೆ ಹೊರಟ ವಿಶ್ವೇಶ್ವರಯ್ಯನವರು ಶಾಲೆಗೆ ತಲುಪುವ ಹೊತ್ತಿಗೆ ಗಂಟೆ 11 ಮೀರಿದ್ದು, ಪರೀಕ್ಷೆಯ ಅರ್ಜಿ ಮತ್ತು ಹಣ ಕೊಡಲು ಸಮಯ ಮೀರಿ ಹೋಗಿರುತ್ತದೆ.

ತನ್ನಕಷ್ಟವನ್ನು ಹೇಳಿಕೊಂಡರೂ ಶಾಲೆಯ ಗುಮಾಸ್ತರು ಹಣ ತೆಗೆದುಕೊಳ್ಳಲು ನಿರಾಕರಿಸಿದಾಗ, ದಿಕ್ಕು ತೋಚದೆ ಅಳುತ್ತಾ ಕುಳಿತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೇಲ್ವಿಚಾರಕರು ಅಳುತ್ತಿದ್ದ ಬಾಲಕನ ಅಳಲನ್ನು ಆಲಿಸಿ, ಹುಡುಗನ ಪರೀಕ್ಷೆಯ ಅರ್ಜಿ ಹಾಗೂ ಹಣವನ್ನು ತೆಗೆದುಕೊಳ್ಳುವಂತೆ ಆಜ್ಞೆ ಮಾಡಿ, ನೋಡಪ್ಪಾ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಪಾಸ್ ಆಗಬೇಕು ಎಂದಾಗ ಬಾಲಕ ವಿಶ್ವೇಶ್ವರಯ್ಯ ನವರಿಗೆ ಆದ ಸಂತೋಷ ಹೇಳತೀರದು.

ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದಾಗ ಅಚ್ಚರಿ ಎಂಬಂತೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾರೆ. ಮುಂದೆ ಎಷ್ಟೇ ಬಡತನವಿದ್ದರೂ ಜೀವನೋತ್ಸಾಹವನ್ನುಕುಗ್ಗಿಸದೆ, ಬದುಕನ್ನುಎದುರಿಸುವ ದಿಟ್ಟತನ ಮತ್ತು ಭವಿಷ್ಯದ ದೃಢ ಸಂಕಲ್ಪಗಳಿದ್ದ ಕಾರಣ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ನಮ್ಮ ಕರ್ನಾಟಕ ಸೇರಿದಂತೆ ದೇಶಕ್ಕೆ ಕೀರ್ತಿ ತಂದು ಹೆಮ್ಮೆಯ ಭಾರತರತ್ನರೆನಿಸುತ್ತಾರೆ. ಸಮಾಜಕ್ಕಾಗಿ ತಮ್ಮ ಇಡೀ ಬದುಕನ್ನೆ ಮೀಸಲಾಗಿರಿಸಿ ಜೀವಿತ ಕಾಲದಲ್ಲಿಯೇ ದಂತಕತೆಯಾಗಿ ಜಗತ್ ಪ್ರಸಿದ್ಧರಾದ ಸರ್. ಎಂ. ವಿಶ್ವೇಶ್ವರಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

-ಡಾ.ಡಿ.ಸಿ. ರಾಮಚಂದ್ರ

RELATED ARTICLES

Latest News