ಬೆಂಗಳೂರು, ಆ.31- ತಮ್ಮ ಪತಿ ಯಾವುದೇ ತಪ್ಪು ಮಾಡಿಲ್ಲ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ನಮ ಕುಟುಂಬದ ಎಲ್ಲರನ್ನೂ ವಿಚಾರಣೆ ನಡೆಸಿದ್ದಾರೆ. ಆದರೆ ಯಾವುದೇ ವಸ್ತುಗಳನ್ನು ಜಪ್ತಿ ಮಾಡಿಲ್ಲ ಎಂದು ಜಯಂತ್ ಟಿ. ಅವರ ಪತ್ನಿ ಶೈಮಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಧರ್ಮಸ್ಥಳದ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನಯ್ಯ ನಮ ಮನೆಗೆ ಮೂರ್ನಾಲ್ಕು ತಿಂಗಳ ಹಿಂದೆ ಎರಡು ಬಾರಿ ಬಂದಿದ್ದ. ಜಯಂತ್ ಟಿ. ಅವರ ಜೊತೆ ಸುತ್ತಾಡುತ್ತಿದ್ದ. ನಮ ಮನೆಗೆ ಬಂದಾಗ ನಾನು ಊಟ ಹಾಕಿದ್ದೇನೆ ಎಂದು ಹೇಳಿದ್ದಾರೆ.
ನಾನು ಮತ್ತೆ ಜಯಂತ್ 2003ರಲ್ಲಿ ಮದುವೆಯಾಗಿದ್ದೇವೆ. ಅಂದಿನಿಂದಲೂ ಮಲ್ಲಸಂದ್ರದಲ್ಲೇ ವಾಸವಿದ್ದೇವೆ. ನಾನು ಸ್ಟ್ಯಾಫ್ ನರ್ಸ್ ಆಗಿದ್ದು, ಜಯಂತ್ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವೃತ್ತಿ ಮಾಡುತ್ತಾರೆ. ನಮಗೆ ಬೇರೆ ಯಾವುದೇ ವ್ಯಾಪಾರ ವಹಿವಾಟುಗಳು ಇಲ್ಲ. ಯಾವ ಮೂಲದಿಂದಲೂ ಹಣ ಬರುವುದಿಲ್ಲ. ಜಯಂತ್ ತಾವು ದುಡಿದ ಹಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಗಾಂಜಾ ಮಾರಾಟ ಸೇರಿದಂತೆ ನಮ ವಿರುದ್ಧ ಯಾವ ಆರೋಪಗಳು ಇಲ್ಲ ಎಂದು ಶೈಮಾ ಸ್ಪಷ್ಟಪಡಿಸಿದ್ದಾರೆ.
ಚಿನ್ನಯ್ಯನ ಫೋಟೋವನ್ನು ಟಿವಿಯಲ್ಲಿ ನೋಡಿದ ಬಳಿಕ ಆತ ನಮ ಮನೆಗೆ ಬಂದಿದ್ದು ಅರಿವಾಯಿತು. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಮ ಮಕ್ಕಳಿಗೂ ಜಯಂತ್ ಹೋರಾಟದ ಬಗ್ಗೆ ಅಪನಂಬಿಕೆಯಿಲ್ಲ. ನಮ ಹೋರಾಟ ಧರ್ಮಸ್ಥಳದ ವಿರುದ್ಧ ಅಲ್ಲ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ನಮ ಕೈಬಿಡುವುದಿಲ್ಲ ಎಂದು ಹೇಳಿದರು.
ಎಸ್‌ಐಟಿ ಅಧಿಕಾರಿಗಳು ನಮ ಮನೆಗೆ ಬರುವುದು ಖಚಿತವಾಗಿತ್ತು. ನಾನು ಕೆಲಸ ಮುಗಿಸಿ ವಾಪಸ್ ಬಂದ ಬಳಿಕ ನನ್ನ ಬಳಿಯೂ ಕೆಲ ವಿಷಯಗಳನ್ನು ಕೇಳಿದರು. ಮಕ್ಕಳ ಬಳಿಯೂ ಮಾತನಾಡಿದ್ದಾರೆ. ನಾವು ನಮಗೆ ತಿಳಿದಂತಹ ವಿಚಾರಗಳನ್ನು ಹೇಳಿಕೊಂಡಿದ್ದೇವೆ ಎಂದು ಶೈಮಾ ತಿಳಿಸಿದ್ದಾರೆ.