ಕಲಬುರಗಿ,ಮೇ.2- ಹಾಸನದ ಪೆನ್‍ಡ್ರೈವ್‍ನ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದೆ ಇದ್ದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಸಲಾಗುವುದು, ಜೊತೆಗೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ಲುಕ್‍ಔಟ್ ನೋಟೀಸ್ ಜಾರಿ ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಲುಕ್‍ಔಟ್ ನೋಟೀಸ್ ಜಾರಿ ಮಾಡಿ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ನಡುವೆ ಪ್ರಜ್ವಲ್ ರೇವಣ್ಣ ಅವರ ವಕೀಲರು ಎಸ್‍ಐಟಿ ಅಧಿಕಾರಿಗಳಿಗೆ ಪತ್ರ ಬರೆದು ತಮ್ಮ ಕಕ್ಷಿದಾರರು ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು 6 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ನಿಯಮಗಳ ಅನುಸಾರ ಕಾಲಾವಕಾಶ ನೀಡಲು ಆಸ್ಪದವಿಲ್ಲ. ಆದರೂ ಎಸ್‍ಐಟಿ ಅಧಿಕಾರಿಗಳು ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದಾರೆ. ಒಂದು ವೇಳೆ ಅವಕಾಶ ಇದ್ದರೆ 6 ದಿನಗಳವರೆಗೂ ಸಮಯ ನೀಡಲಾಗುವುದು. ಅಷ್ಟರೊಳಗೆ ವಿಚಾರಣೆಗೆ ಹಾಜರಾಗಲೇಬೇಕು. ಮತ್ತೆ ಅವಧಿ ವಿಸ್ತರಣೆ ಅಥವಾ ಇತರ ವಿನಾಯಿತಿಗಳಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಸಮಯಾವಕಾಶ ನೀಡಲು ಅವಕಾಶ ಇಲ್ಲದೇ ಇದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಅಗತ್ಯ ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.
24 ಗಂಟೆಯೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರಿಗೆ ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಬರದೇ ಇದ್ದರೆ ಎಸ್‍ಐಟಿ ಅಧಿಕಾರಿಗಳು ಬಂಧನಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ರೇವಣ್ಣ ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಸಂತ್ರಸ್ತ ಮಹಿಳೆಯರ ಪೈಕಿ ಕೆಲವರ ಹೇಳಿಕೆಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ನಿನ್ನೆ ಇನ್ನೊಬ್ಬ ಮಹಿಳೆ ದೂರು ನೀಡಿದ್ದಾರೆ. ಆಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತಿಲ್ಲ ಎಂದ ಪರಮೇಶ್ವರ್‍ರವರು, ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಲಿದೆ. ಇದರಲ್ಲಿ ಮಹಿಳೆಯರ ಸುರಕ್ಷತೆಯ ಜೊತೆಗೆ ಕುಟುಂಬ ಹಾಗೂ ಅವರ ಜೀವನದ ಪ್ರಶ್ನೆಯೂ ಅಡಗಿರುವುದರಿಂದಾಗಿ ಎಲ್ಲಾ ಪ್ರಕರಣಗಳಂತೆ ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಸೂಕ್ಷ್ಮ ಹಾಗೂ ವಿಶೇಷವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.
ಈ ನಡುವೆ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ಎಸ್‍ಐಟಿ ಅಥವಾ ಪೊಲೀಸ್ ತನಿಖೆಗೆ ಅಪ್ರಸ್ತುತವಾಗಿವೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಪಾರದರ್ಶಕವಾದ ತನಿಖೆ ನಡೆಸುತ್ತದೆ ಎಂದರು. ಪೆನ್‍ಡ್ರೈವ್‍ಗಳು ಬೆಳಕಿಗೆ ಬಂದ ತಕ್ಷಣ ಪ್ರಜ್ವಲ್ ರೇವಣ್ಣನನ್ನು ಏಕೆ ಬಂಸಲಿಲ್ಲ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಆ ವೇಳೆ ದೂರು ನಮಗೆ ಬಂದಿರಲಿಲ್ಲ. ಒಬ್ಬ ಮಹಿಳೆ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಬದಲಾವಣೆ ಗಾಳಿ :
ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈವರೆಗೆ 180 ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಅವುಗಳ ಪೈಕಿ 46 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಸೋಲಲಿದೆ ಎಂದು ವಾದಿಸಲಾಗುತ್ತಿತ್ತು. ಆದರೆ 136 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ. ರಾಜಕೀಯವಾಗಿ ಬದಲಾವಣೆ ಗಾಳಿ ಬೀಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.