Thursday, July 24, 2025
Homeರಾಜ್ಯಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣದ ತನಿಖೆಗೆ 20 ಅಧಿಕಾರಿಗಳ ಎಸ್‌ಐಟಿ ರಚನೆ

ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣದ ತನಿಖೆಗೆ 20 ಅಧಿಕಾರಿಗಳ ಎಸ್‌ಐಟಿ ರಚನೆ

SIT of 20 officers formed to investigate the unnatural death case in Dharmasthala

ಬೆಂಗಳೂರು, ಜು.23- ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದರ ಜೊತೆಗೆ 20 ಅಧಿಕಾರಿಗಳ ತಂಡಕ್ಕೆ ತನಿಖೆಯ ನೇತೃತ್ವ ವಹಿಸಿದೆ. ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ ಗೊಂದಲದ ಆರೋಪಗಳ ಬಗ್ಗೆ ಈ ತಂಡವು ಸಮಗ್ರ ತನಿಖೆ ನಡೆಸಲಿದೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವುಗಳ ಕುರಿತಾಗಿ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ ಐಟಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಎಸ್‌ಐಟಿ ಸದಸ್ಯರಾಗಿ ಅನುಚೇತ್, ಸೌಮ್ಯ ಲತಾ, ಜಿತೇಂದ್ರ ಕುಮಾ‌ರ್ ಇದ್ದಾರೆ.

ಇವರ ಜೊತೆಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಾಂತಿ ನೇತೃತ್ವದಲ್ಲಿ 20 ಖಡಕ್ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ತಂಡದಲ್ಲಿ 1 ಎಸ್ಪಿ, 2 ಡಿಎಸ್ಪಿ, 4 ಪೊಲೀಸ್ ಇನ್‌ಸ್ಪೆಕ್ಟರ್, ॥ ಸಿಪಿಐ, 7 ಪಿಎಸ್ಐ, 1 ಎಎಸ್‌ಐ ಮತ್ತು 4 ಮುಖ್ಯ ಪೇದೆಗಳು ಸೇರಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಆಯ್ಕೆಯಾದ ಈ ಅಧಿಕಾರಿಗಳು ಡಿಸಿಆರ್‌ಇ, ಕರಾವಳಿ ಭದ್ರತಾ ಪೊಲೀಸ್, ಮೆಸ್ಕಾಂ ಮತ್ತು ಎಫ್‌.ಎಂಎಸ್ ವಿಭಾಗಗಳಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರಿಂದ ಈ ತಂಡಕ್ಕೆ ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು, ತನಿಖೆಯ ಪ್ರಗತಿಯನ್ನು ನಿಯಮಿತವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿಯಾಗಿ ಸಲ್ಲಿಸಲಾಗುವುದು ತಂಡವು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಪ್ರಕರಣದ ವಿವರಗಳನ್ನು ಸಂಗ್ರಹಿಸಿ, ಸ್ಥಳ ಪರಿಶೀಲನೆ, ಸಾಕ್ಷಿಗಳ ವಿಚಾರಣೆ ಮತ್ತು ಆಸ್ಥಿಪಂಜರಗಳ ಡಿಎನ್ಎ ಪರೀಕ್ಷೆಯನ್ನು ನಡೆಸಲಿದೆ.

ಎಸ್‌ಐಟಿ ತಂಡವು ಈಗ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶವಗಳ ದಫನ ಸ್ಥಳಗಳನ್ನು ಗುರುತಿಸಲು ಮತ್ತು ಆಸ್ಥಿಪಂಜರೆಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಕಾರ್ಯಪ್ರವೃತ್ತವಾಗಿದೆ. ಪೊಲೀಸ್ ದಾಖಲೆಗಳ ಜೊತೆಗೆ, ಸಾಕ್ಷಿಗಳ ಹೇಳಿಕೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಈ ಪ್ರಕರಣವನ್ನು ಭೇದಿಸಲು ಕೆದಕಲು ತಂಡವು ಸಿದ್ಧತೆ ನಡೆಸಿದೆ. ಈ ತನಿಖೆಯ ಫಲಿತಾಂಶವು ಧರ್ಮಸ್ಥಳದಲ್ಲಿ ನಡೆದ ಈ ಗಂಭೀರ ಆರೋಪಗಳ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲಿದೆ ಎಂಬ ನಿರೀಕ್ಷೆಯಿದೆ.

ಧರ್ಮಸ್ಥಳದ ಘಟನೆಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ರಚನೆ ಮಾಡಬೇಕು ಎಂಬ ಬೇಡಿಕೆ ಇತ್ತು. ಹಿರಿಯ ವಕೀಲರ ತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಅದರಂತೆ ಇದೀಗ ಎಸ್‌ಐಟಿ ರಚನೆ ಆಗಿದೆ. ಎಸ್‌ಐಟಿ ತಂಡವು ಧರ್ಮಸ್ಥಳದಲ್ಲಿ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಹಲ್ಲೆ, ಅಸ್ವಾಭಾವಿಕ ಸಾವು ಸೇರಿದಂತೆ ಇತರ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿಯನ್ನು ನೀಡಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ನೂರಾರು ಆಸಹಜ ಸಾವುಗಳು ನಡೆದಿದೆ ಎಂಬ ಚರ್ಚೆ ಕಾವು ಪಡೆದ ಬೆನ್ನಲ್ಲೇ, ತನಿಖೆ ತೀವ್ರಗೊಂಡಿದೆ. ಇನ್ನು ಶವಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬರು ಬೆಳ್ತಂಗಡಿ ನ್ಯಾಯಾಲಯದಲ್ಲಿ ನೀಡಿದ ದೂರಿನ ನಂತರ ರಾಜ್ಯ ಸರ್ಕಾರವು ಈ ಗಂಭೀರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಎಸ್‌ಐಟಿ ತಂಡ ಇದೀಗ ಧರ್ಮಸ್ಥಳದ ಪ್ರಕರಣ ಭೇದಿಸಲು ಸಿದ್ಧವಾಗಿದ್ದು, ಈ ತಂಡವು ಧರ್ಮಸ್ಥಳದಲ್ಲಿ 2003 ರಿಂದ 2013ರವರೆಗೆ ದಾಖಲಾಗಿರುವ ಆಸಹಜ ಸಾವುಗಳ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದೆ.

ಜುಲೈ 2025ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 39/2025ರ ದೂರಿನಲ್ಲಿ ದೂರುದಾರನು ತಾನು ನೂರಾರು ಮೃತದೇಹಗಳನ್ನು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಘನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ದೂರಿನ ಬೆನ್ನಲ್ಲೇ, ಬೆಳ್ತಂಗಡಿ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 2003 ರಿಂದ 2013ರವರೆಗೆ ಆಸಹಜ ಸಾವುಗಳು, ಆತ್ಮಹತ್ಯೆ, ಆಕಸ್ಮಿಕ ಸಾವುಗಳು ಮತ್ತು ಕೊಲೆ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳಿರುವುದು ಬೆಳಕಿಗೆ ಬಂದಿದೆ. ಈ ದಾಖಲೆಗಳಲ್ಲಿ ಗುರುತು ಪತ್ತೆಯಾದ ಮತ್ತು ಗುರುತು ಪತ್ತೆಯಾಗದೆ (ಯುಡಿಆರ್ ಅನಾಥ ಶವ) ಮೃತದೇಹಗಳ ಬಗ್ಗೆ ಮಾಹಿತಿಯಿದೆ.

ಹೀಗಿರುವಾಗ ಅನಾಥ ಶವಗಳ ದಭನ ಕಾರ್ಯವನ್ನು ಎಲ್ಲಿ, ಯಾವ ಜಾಗದಲ್ಲಿ ನಡೆಸಿತ್ತು ಎಂಬುದರ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಸ್ಪಷ್ಟ ದಾಖಲೆ ಇದ್ಯಾ? ಎಂಬ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. ದೂರುದಾರನ ಹೇಳಿಕೆಯ ಪ್ರಕಾರ, ಧರ್ಮಸ್ಥಳದ ಸ್ನಾನಘಟ್ಟ, ವಸತಿಗೃಹಗಳು ಮತ್ತು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಶವಗಳನ್ನು ದಫನ ಮಾಡಲಾಗಿದೆ. ಈ ಆರೋಪಗಳನ್ನು ದೃಢೀಕರಿಸಲು ಎಸ್‌ಐಟಿ ತಂಡವು ಈಗ ಪೊಲೀಸ್ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಡಿಎನ್ಎ ಪರೀಕ್ಷೆ ಮತ್ತು ಸ್ಥಳ ಮಹಜರು ಸೇರಿದಂತೆ ತನಿಖೆಯನ್ನು ತೀವ್ರಗೊಳಿಸಿದೆ.

16 ವರ್ಷಗಳಿಂದ ನಡೆದ ಸಾಮೂಹಿಕ ಅಂತ್ಯಕ್ರಿಯೆಗಳು, ಲೈಂಗಿಕ ಹಿಂಸೆ ಮತ್ತು ಮುಚ್ಚಿ ಹಾಕುವಿಕೆಯ ಆರೋಪಗಳು ಕರ್ನಾಟಕದ ದೇವಾಲಯ ಪಟ್ಟಣವಾದ ಧರ್ಮಸ್ಥಳದ ಮೇಲೆ ತೀವ್ರ ಟೀಕೆಗೆ ಗುರಿಯಾಗಿದ್ದವು. 1998 ಮತ್ತು 2014 ರ ನಡುವೆ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳನ್ನು ಹೊಳಲು ಮತ್ತು ವಹನ ಮಾಡಲು ಒತ್ತಾಯಿಸಲಾಗಿದೆ ಎಂದು ಮಾಜಿ ನೈರ್ಮಲ್ಯ ಕಾರ್ಮಿಕರೊಬ್ಬರು ಆರೋಪಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ, ಸಾಕ್ಷಿಗಳಿಗೆ ರಕ್ಷಣೆ ನೀಡಲಾಯಿತು ಮತ್ತು ಅಸ್ಥಿಪಂಜರದ ಅವಶೇಷಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಸಾರ್ವಜನಿಕರ ಆಕ್ರೋಶ, ಕಾನೂನು ಮಧ್ಯಸ್ಥಿಕೆಗಳು ಮತ್ತು 2003 ರಲ್ಲಿ ಮಹಿಳೆಯೊಬ್ಬರ ಕಣ್ಣರೆ ಬಗ್ಗೆ ದೂರು ಸೇರಿದಂತೆ ಹೆಚ್ಚಿನ ಆರೋಪಗಳ ನಂತರ, ಸರ್ಕಾರವು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲು ಎಸ್ ಐಟಿಯನ್ನು ರಚಿಸಿದೆ.
ಧರ್ಮಸ್ಥಳದಲ್ಲಿ ನಡೆದ ವ್ಯವಸ್ಥಿತ ಅಪರಾಧಗಳ ಕುರಿತಾದ ಸಂವೇದನಾಶೀಲ ಆರೋಪಗಳು ಬಹಳ ಹಿಂದಿನಿಂದಲೂ ಮರೆತುಹೋಗಿದ್ದ ಎರಡು ಪ್ರಕರಣಗಳನ್ನು ಪುನರುಜ್ಜಿವನಗೊಳಿಸಿವೆ. ರಾಜಕೀಯ ಮತ್ತು ಪೊಲೀಸ್ ಒತ್ತಡದಲ್ಲಿ ಹೂತುಹೋಗಿರುವ ತಮ್ಮ ಪ್ರಕರಣಗಳನ್ನು ಮತ್ತೆ ತೆರೆಯುವಂತೆ ಸಂತ್ರಸ್ಥ ಕುಟುಂಬಗಳು ಎಸ್ ಐಟಿಯನ್ನು ಒತ್ತಾಯಿಸಿವೆ.

RELATED ARTICLES

Latest News