ಬೆಂಗಳೂರು,ಮೇ 5- ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಬ್ಲೂ ಕಾರ್ನರ್ ನೋಟೀಸ್ ಜಾರಿಯಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಎಸ್‌ಐಟಿ ಅಧಿ ಕಾರಿಗಳಿಗೆ ಗೊತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್‌ಗೆ ತಿಳಿಸಿ ಬ್ಲೂ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗಿದೆ.
ವಿವಿಧ ದೇಶಗಳ ಪೊಲೀಸರನ್ನು ಸಂಪರ್ಕಿಸಿ ಮೊಬೈಲ್‌ನ ಲೊಕೇಶನ್ ಆಧರಿಸಿ ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಅದರ ಬಳಿಕ ಎಸ್‌ಐಟಿ ಅಧಿ ಕಾರಿಗಳು ವಿದೇಶದಿಂದ ಕರೆತರುವ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದ್ದಾರೆ. ಅದಕ್ಕೆ ಅಗತ್ಯವಾದ ಸಹಕಾರಗಳನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಎಸ್‌ಐಟಿ ಅಧಿ ಕಾರಿಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಎಸ್‌ಐಟಿಯ ಮೇಲೂ ಆಪಾದನೆಗಳು ಬರುವ ಸಾಧ್ಯತೆಯಿದೆ. ಹೀಗಾಗಿ ನಿಯಮ ಅನುಸಾರವೇ ಕಾನೂನಿನ ಚೌಕಟ್ಟಿನಲ್ಲಿ ಎಲ್ಲವೂ ನಡೆಯಬೇಕು. ನಿಯಮ ಬಿಟ್ಟು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿ ಕಾರಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದರೆ ಎಸ್‌ಐಟಿ ಅಧಿ ಕಾರಿಗಳಿಗೆ ಮಾಹಿತಿ ಇದೆ. ಭಾರತಕ್ಕೆ ಕರೆದುಕೊಂಡು ಬರುವವರೆಗೂ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದರು.
ತನಿಖೆಗೆ ಸಂಬಂಧಪಟ್ಟಂತೆ ಯಾವುದೇ ವಿಚಾರಗಳನ್ನು ನಾವು ಬಹಿರಂಗಪಡಿಸುತ್ತಿಲ್ಲ. ಮೇಲ್ನೋಟಕ್ಕೆ ಸಾಧುವಾದಂತಹ ಮಾಹಿತಿಯನ್ನು ನಾನೇ ನೇರವಾಗಿ ಮಾತನಾಡುತ್ತಿದ್ದೇನೆ. ಉಳಿದಂತೆ ತನಿಖೆಯ ಆಂತರಿಕ ಮಾಹಿತಿಗಳು ಎಸ್‌ಐಟಿಯ ಒಳ ವಲಯದಲ್ಲೇ ನಡೆಯುತ್ತಿದೆ. ನಮಗೂ ಕೂಡ ತಿಳಿಯುವುದಿಲ್ಲ. ಒಂದು ವೇಳೆ ಎಸ್‌ಐಟಿಯಿಂದ ವಿಚಾರಗಳು ಬಹಿರಂಗಗೊಳ್ಳುತ್ತವೆ ಎಂದಾದರೆ ಮತ್ತಷ್ಟು ಬಿಗಿಗೊಳಿಸುವುದಾಗಿ ಕುಮಾರಸ್ವಾಮಿಯವರ ಟೀಕೆಗೆ ಪ್ರತಿಕ್ರಿಯಿಸಿದರು.
ಎಸ್‌ಐಟಿ ತನಿಖೆ ಯಾವ ರೀತಿ ನಡೆಯುತ್ತಿದೆ ಎಂದು ವಕ್ತಾರರ ಮಾದರಿಯಲ್ಲಿ ತಾವು ವಿವರ ನೀಡಲು ಸಾಧ್ಯವಿಲ್ಲ. ಎಸ್‌ಐಟಿ ಕಾನೂನು ಪ್ರಕಾರ ದೂರು ಆಧರಿಸಿ ರೇವಣ್ಣ ಅವರನ್ನು ಬಂಧಿಸಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
ವಿಡಿಯೋ ಬಹಿರಂಗವಾದ ಮೂಲಗಳು ಸೇರಿದಂತೆ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲೂ ಎಸ್‌ಐಟಿ ಅಧಿ ಕಾರಿಗಳು ತನಿಖೆ ನಡೆಸುತ್ತಾರೆ. ಕಾರ್ತಿಕ್ ಎಂಬಾತ ಎಲ್ಲಿದ್ದಾರೆ? ಎಂಬ ಬಗ್ಗೆಯೂ ಎಸ್‌ಐಟಿ ಅಧಿ ಕಾರಿಗಳಿಗೆ ಮಾಹಿತಿ ಇರಬಹುದು ಎಂದರು.
ಪ್ರಜ್ವಲ್ ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ :
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಸಂಜೆ ಅಥವಾ ನಾಳೆ ಭಾರತಕ್ಕೆ ವಾಪಾಸ್ ಆಗುವ ಸಾಧ್ಯತೆಯಿದ್ದು, ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬೆಂಗಳೂರು, ಮಂಗಳೂರು ಮತ್ತು ಗೋವಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣದಲ್ಲಿ ತೀವ್ರ ನಿಗಾ ವಹಿಸಿದೆ.
ಸಂಸದ ಪ್ರಜ್ವಲ್ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದರಿಂದ ಅವರು ಭಾರತಕ್ಕೆ ಬಂದು ಇಳಿಯುತ್ತಿದ್ದಂತೆ ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ. ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ವಿದೇಶದಲ್ಲಿ ಇರುವುದರಿಂದ ವಿಚಾರಣೆಗೆ ಹಾಜರಾಗಲು 7 ದಿನಗಳು ಕಾಲಾವಕಾಶ ನೀಡಬೇಕೆಂದು ತಮ ವಕೀಲರ ಮೂಲಕ ಪ್ರಜ್ವಲ್ ಅವರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ್ದ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು.
ನಂತರ ಬ್ಲೂ ಕಾರ್ನರ್ ಅಸ್ತ್ರ ಪ್ರಯೋಗಿಸಿ ಬಂಧನಕ್ಕೆ ಸಿದ್ಧತೆ ನಡೆಸಿದೆ. ಈ ನಡುವೆ ಜೆಡಿಎಸ್‌ನ ಮಾಜಿ ಸಂಸದರೊಬ್ಬರು ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಹಿಂದಿರುಗುವ ಮಾಹಿತಿ ನೀಡಿದ್ದರು. ಲೈಂಗಿಕ ದೌರ್ಜನ್ಯದ ಪ್ರಕರಣ ಪ್ರಮುಖದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಇಂದು ಸಂಜೆ ಅಥವಾ ನಾಳೆ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ದಟ್ಟವಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ.
ಸಿಐಡಿ ಠಾಣೆಯಲ್ಲಿ ಮಹಿಳೆಯೊಬ್ಬರು ಹಾಗೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಸಂಸದರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ದಾಖಲಿಸಿದ್ದಾರೆ.ಮಹಿಳೆಯ ಅಪಹರಣ ಪ್ರಕರಣದಲ್ಲಿ ತನ್ನ ತಂದೆ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಸಿಗದೆ ಹಿನ್ನೆಲೆಯಲ್ಲಿ ಎಸ್‌ಐಟಿ ನಿನ್ನೆ ಅವರನ್ನು ಬಂಧಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಶೀಘ್ರದಲ್ಲೇ ವಿದೇಶದಿಂದ ಭಾರತಕ್ಕೆ ವಾಪಾಸ್ ಆಗುವ ಸಾಧ್ಯತೆ ಇದೆ.
ಕ್ಷಣಕ್ಕೊಂದು ತಿರುವು.. :
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಾಸನ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಹಾಸನದಲ್ಲಿ ಹರಿದಾಡಿದೆ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಸಂತ್ರಸ್ತೆಯರು ದೂರು ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಮಹಿಳೆಯೊಬ್ಬರು ಸಿಐಡಿ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಮತ್ತೆ ಮೂವರು ಮಹಿಳೆಯರು ದೂರು ನೀಡಲು ಮುಂದೆ ಬಂದಿರುವುದರಿಂದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಮೂವರು ಸಂತ್ರಸ್ತೆಯರು ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಎಸ್‌ಐಟಿ ಪರಿಶೀಲನೆ ನಡೆಸುತ್ತಿದ್ದು, ಮೂವರಿಂದ ಪ್ರತ್ಯೇಕ ದೂರು ದಾಖಲಾಗುವ ಸಾಧ್ಯತೆಯಿದೆ.ಮಹಿಳೆಯ ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಾಸಕ ರೇವಣ್ಣ ಅವರನ್ನು ಬಂಧಿಸಲಾಗಿದೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿಲು ಎಸ್‌ಐಟಿ ಬ್ಲೂ ಕಾರ್ನರ್ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ.