ಗುವಾಹಟಿ, ಜೂ. 1 (ಪಿಟಿಐ) ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, 11 ಜಿಲ್ಲೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಮಲ್ ಚಂಡಮಾರುತದ ನಂತರ ನಿರಂತರ ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ರಸ್ತೆ ಮತ್ತು ರೈಲು ಸಂಪರ್ಕವು ಅಸ್ತವ್ಯಸ್ತವಾಗಿದೆ ಎಂದು ಅವರು ಹೇಳಿದರು.
ಹೆಚ್ಚು ಹಾನಿಗೊಳಗಾದ ಕ್ಯಾಚಾರ್ ಜಿಲ್ಲೆಯಲ್ಲಿ, ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಇಂದು ಬಂದ್ ಮಾಡಲಾಗಿದೆ ಎಂದು ಅಧಿಕತ ಪ್ರಕಟಣೆ ತಿಳಿಸಿದೆ, ನಿಗದಿತ ಸೆಮಿಸ್ಟರ್ ಮತ್ತು ವಿಭಾಗೀಯ ಪರೀಕ್ಷೆಗಳನ್ನು ಯೋಜಿಸಿದಂತೆ ನಡೆಸಲಾಗುವುದು ಎಂದು ತಿಳಿಸಿದೆ.
ಕರ್ಬಿ ಆಂಗ್ಲಾಂಗ್, ಧೇಮಾಜಿ, ಹೊಜೈ, ಕ್ಯಾಚಾರ್, ಕರೀಮ್‌ಗಂಜ್, ದಿಬ್ರುಗಢ, ನಾಗಾಂವ್, ಹೈಲಕಂಡಿ, ಗೋಲಾಘಾಟ್, ಪಶ್ಚಿಮ ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಜಿಲ್ಲೆಗಳಲ್ಲಿ ಸುಮಾರು 3.5 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸುಮಾರು 30,000 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ, ವಿವಿಧ ರಕ್ಷಣಾ ಸಂಸ್ಥೆಗಳು ದುರ್ಬಲ ಪ್ರದೇಶಗಳಲ್ಲಿರುವವರನ್ನು ಸ್ಥಳಾಂತರಿಸುತ್ತಿವೆ. ಕಚಾರ್ ಜಿಲ್ಲೆಯಲ್ಲಿ 1,19,997 ಜನರು ಬಾಧಿತರಾಗಿದ್ದಾರೆ, ನಂತರ ನಾಗಾವ್ (78,756), ಹೊಜೈ (77,030) ಮತ್ತು ಕರೀಮ್‌ಗಂಜ್ (52,684) ಜನ ಸಂತ್ರಸ್ಥರಾಗಿದ್ಧಾರೆ.
ಮೇ 28 ರಿಂದ ರಾಜ್ಯದಲ್ಲಿ ಪ್ರವಾಹ, ಮಳೆ ಮತ್ತು ಬಿರುಗಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 12 ಕ್ಕೆ ತಲುಪಿದೆ. ಸತತ ಮಳೆಯಿಂದಾಗಿ ಬರಾಕ್ ಕಣಿವೆ ಮತ್ತು ದಿಮಾ ಹಸಾವೊದಲ್ಲಿ ರೈಲು ಮತ್ತು ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಮೇಘಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯ ಭಾಗವು ಕೊಚ್ಚಿಹೋಗಿದ್ದರಿಂದ ವಾಹನಗಳು ಸಿಕ್ಕಿಹಾಕಿಕೊಂಡಿವೆ, ಬರಾಕ್ ಕಣಿವೆಯಲ್ಲಿ ಉಳಿದ ರಾಜ್ಯ ಮತ್ತು ಪ್ರದೇಶಗಳೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ ವಕ್ತಾರರ ಪ್ರಕಾರ, ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಅಲ್ಪಾವಧಿಗೆ ಕೊನೆಗೊಳಿಸಲಾಗಿದೆ.
ಏತನಧ್ಯೆ, ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತದ ಪರಿಣಾಮದಿಂದಾಗಿ ನೈಋತ್ಯ ಮಾನ್ಸೂನ್ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರವೇಶಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.