ಮಂಡ್ಯ,ಡಿ.10- ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ. ಎಸ್.ಎಂ.ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಕೆಫೆ ಕಾಫಿ ಡೇ ನಡೆಯುತ್ತಿತ್ತು. ಪಕ್ಕದಲ್ಲಿನ ಜಾಗದಲ್ಲಿ ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ಕ್ರಿಯೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂಡ್ಯ ಜಿಲ್ಲೆ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕ ಉದಯ್ ಸೇರಿದಂತೆ ಹಲವಾರು ಮಂದಿ ಸ್ಥಳಕ್ಕೆ ತೆರಳಿ ಪೂರ್ವ ಸಿದ್ಧತೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಜಿಲ್ಲಾಡಳಿತ ಕೂಡ ಅಗತ್ಯ ಸಿದ್ಧತೆಗಳಿಗೆ ತಯಾರಿ ಆರಂಭಿಸಿದೆ. ಮಂಡ್ಯ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ತೆರಳಿದ್ದು, ವಿಶೇಷ ಅತಿಥಿಗಳ ಆಗಮನ ಹಾಗೂ ಆಸನ ವ್ಯವಸ್ಥೆ, ಪಾರ್ಕಿಂಗ್, ಭದ್ರತೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ನಾಳೆ ಬೆಳಿಗ್ಗೆ ಎಸ್.ಎಂ.ಕೃಷ್ಣ ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಮದ್ದೂರಿನವರೆಗೂ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಲಿದೆ. ನಂತರ ಸೋಮನಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿದೇಶದಲ್ಲಿರುವ ಸಂಬಂಧಿಕರು ಆಗಮಿಸುವುದು ತಡವಾಗುವ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ನಿರ್ಧರಿಸಲಾಗಿದೆ.
ಅಂತ್ಯಕ್ರಿಯೆಗೆ ಸಕಲ ಸಿದ್ಧತೆ :
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಾಳೆ ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಜಿಲ್ಲಾ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಂತ್ಯಕ್ರಿಯೆ ನಡೆಯಲಿರುವ ಸ್ಥಳಕ್ಕೆ ಇಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಈ ಸಂಜೆಯೊಂದಿಗೆ ಮಾತನಾಡಿದ ಎಸ್‌ಪಿ ಬಾಲದಂಡಿಯವರು ಅಂತ್ಯ ಕ್ರಿಯೆಗೆ ಸಾಕಷ್ಟು ಸಂಖ್ಯೆಯಲ್ಲಿ ವಿವಿಐಪಿಗಳು ಹಾಗೂ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಆಗಮಿಸುವ ಹಿನ್ನಲೆಯಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗುತ್ತದೆ ಎಂದು ವಿವರಿಸಿದರು.
ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂಧಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತದೆ, ಅಲ್ಲದೇ ನೆರೆ ಜಿಲ್ಲೆಗಳಿಂದ ಇಬ್ಬರು ಅಡಿಷನಲ್ ಎಸ್‌ಪಿಗಳೂ ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುವುದು ಎಂದರು. ಸಾರ್ವಜನಿಕ ಅಂತಿಮ ದರ್ಶನಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.