ಬೆಂಗಳೂರು,ಫೆ.15- ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಗ ಸಚಿವರು ಪಟ್ಟು ಹಿಡಿದಿರುವ ನಡುವೆಯೇ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಯಾವುದೇ ಏರುಪೇರುಗಳಿರುವುದಿಲ್ಲ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಆದರೂ ಕೆಲ ಸಚಿವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಬೇಡಿಕೆಯಿಟ್ಟು ಬಂದಿದ್ದಾರೆ. ಅಧ್ಯಕ್ಷಸ್ಥಾನವನ್ನು ನನಗೆ ನೀಡಿದರೆ ನಿಭಾಯಿಸಲು ಸಿದ್ಧ ಎಂದು ಸ್ಪಷ್ಟವಾಗಿಯೂ ಸಂದೇಶ ಸಾರಿದ್ದಾರೆ.
ಹೈಕಮಾಂಡ್ ರಾಜ್ಯದಲ್ಲಿ ರಾಜಕೀಯ ಗೊಂದಲಗಳಿಗೆ ಅವಕಾಶ ನೀಡಬೇಡಿ. ನಿಮ್ಮ ನಿಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಿ ಎಂದು ಸೂಚನೆ ನೀಡಿದ್ದರೂ ಕೂಡ ಕೆಲವರು ಉದ್ದೇಶಪೂರಕವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಎಂದು ಆರಂಭದಲ್ಲಿ ಕೆಲವರು ಹೇಳಿಕೆ ನೀಡಿದ್ದರು. ಇದಕ್ಕೆ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ತಮಗೆ ಯಾವುದೇ ಶಾಸಕರ ಬೆಂಬಲ ಬೇಡ. ಅವಕಾಶಗಳನ್ನು ನೀಡುವುದು ಅಥವಾ ಬಿಡುವುದು ಹೈಕಮಾಂಡ್ ಬಿಟ್ಟ ವಿಚಾರ. ಬಹಿರಂಗ ಹೇಳಿಕೆಗಳನ್ನು ನೀಡಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ತಿಳಿಸಿದರು.
ಆನಂತರ ಡಿ.ಕೆ.ಶಿವಕುಮಾರ್ ಬಣದಿಂದ ಯಾವುದೇ ವ್ಯತಿರಿಕ್ತ ಹೇಳಿಕೆಗಳು ಕೇಳಿಬರುತ್ತಿಲ್ಲ, ಆದರೆ ಸಿದ್ದರಾಮಯ್ಯ ಅವರ ಬಣದಲ್ಲಿ ಪದೇಪದೇ ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆ. ಒಂದು ಕಾಲಕ್ಕೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅದು ಸಾಧ್ಯವಾಗದಿದ್ದಾಗ ಉಪಮುಖ್ಯಮಂತ್ರಿಯಾಗುವ ಪ್ರಯತ್ನ ನಡೆಸಿದ್ದರು.
ಅದೂ ಕೈಕೊಟ್ಟಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಚಿವರ, ಶಾಸಕರ ಪ್ರತ್ಯೇಕ ಸಭೆ ನಡೆಸಲು ಮುಂದಾಗುವ ಮೂಲಕ ಗೊಂದಲ ಸೃಷ್ಟಿಸಿದ್ದರು. ಅದಕ್ಕೆ ಹೈಕಮಾಂಡ್ ಕಡಿವಾಣ ಹಾಕಿದ ನಂತರ ಅಲ್ಲಲ್ಲಿ ಭೋಜನಾಕೂಟದ ಸಭೆಗಳು, ಸೌಹಾರ್ದ ಸಭೆಗಳು ನಡೆಯಲಾರಂಭಿಸಿದವು. ಈ ಎಲ್ಲವೂ ಪಕ್ಷದಲ್ಲಿ ದಿನೇದಿನೇ ಗೊಂದಲಗಳನ್ನು ಹೆಚ್ಚಿಸುತ್ತಲೇ ಇವೆ.
136 + 3 ಶಾಸಕರನ್ನು ರಾಜ್ಯದ ಜನ ಗೆಲ್ಲಿಸಿಕೊಟ್ಟು ಸದೃಢ ಸರ್ಕಾರಕ್ಕೆ ಅಂಕಿತ ಹಾಕಿದ್ದರೂ ಕೂಡ ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರದ ದಾಹಕ್ಕಾಗಿ ಪ್ರತ್ಯೇಕ ಸಭೆಗಳ ಮೂಲಕ ಗೊಂದಲ ಮೂಡಿಸಿ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಟೀಕೆಗಳು ಪಕ್ಷದಲ್ಲೇ ಕೇಳಿಬರುತ್ತಿವೆ.
ಹೈಕಮಾಂಡ್ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಪದೇಪದೇ ಈ ರೀತಿಯ ವರ್ತನೆಗಳು ಮರುಕಳಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದವರೇ ಆಗಿರುವುದರಿಂದ ಕೆಲವರು ಅವರನ್ನು ಸಲುಗೆಯಿಂದ ತೆಗೆದುಕೊಂಡು ತಾವು ಆಡಿದ್ದೇ ಆಟ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಟೀಕೆಗಳಿವೆ.
ಡಿ.ಕೆ.ಶಿವಕುಮಾರ್‌ರವರು ಸ್ವಯಂ ಇಚ್ಛೆಯಿಂದ ಅಧ್ಯಕ್ಷ ಸ್ಥಾನ ತೊರೆಯುವವರೆಗೂ ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸಂದೇಶ ನೀಡಿದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜವಾಬ್ದಾರಿಯ ಕುರಿತು ಯಾವುದೇ ಬದಲಾವಣೆಗಳ ಮುನ್ಸೂಚನೆ ಇಲ್ಲ ಎಂದು ಸಂದೇಶ ತಲುಪಿದೆ.
ಅದರ ಹೊರತಾಗಿ ದಲಿತ ಸಮುದಾಯದ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸಲು ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಬಿಜೆಪಿಯಲ್ಲಿನ ಒಡಕುಗಳಿಗಿಂತಲೂ ಕಾಂಗ್ರೆಸ್‌ನಲ್ಲಿನ ಗದ್ದುಗೆಯ ಕಿತ್ತಾಟ ರಾಜ್ಯದ ಜನರನ್ನು ರೇಜಿಗಿಡಿಸಿದೆ.