ಚಿಕ್ಕಮಗಳೂರು,ಫೆ.18- ಅತ್ತೆಯನ್ನು ಹತ್ಯೆಗೈದು ಪರಾರಿಯಾಗಿದ್ದ ಅಳಿಯ ಕಾಫಿತೋಟದಲ್ಲಿ ನೇಣಿಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ವ್ಯಕ್ತಿಯನ್ನು ಶಶಿಧರ್ ಎಂದು ಗುರುತಿಸಲಾಗಿದೆ.
ಕುಡಿದ ಮತ್ತಿನಲ್ಲಿದ್ದ ಆತನಿಗೆ ಅತ್ತೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಿಗೆದ್ದು 65 ವರ್ಷದ ಯಮುನಾ ಎಂಬುವರನ್ನು ಅಳಿಯ ಶಶಿಧರ್ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.
ಶಶಿಧರ್ ಪತ್ತೆಗಾಗಿ ಬಣಕಲ್ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. ಇದರಿಂದ ಅಂಜಿ ಆತ ಭಾರಿಬೈಲ್‌ನ ಕಾಫಿತೋಟದಲ್ಲಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಕಾಫಿತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.