ಭಾರತ ತಂಡ 2007ರ ಚುಟುಕು ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡಲು ಮಹತ್ತರ ಪಾತ್ರ ವಹಿಸಿದ್ದ ಸಿಕ್ಸರ್ ಗಳ ಸರದಾರ ಯುವರಾಜ್ ಸಿಂಗ್ ವೆಸ್್ಟ ಇಂಡೀಸ್ ಹಾಗೂ ಅಮೇರಿಕದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20-ಐ ವಿಶ್ವಕಪ್ ಟೂರ್ನಿಯಲ್ಲಿ ರಾಯಭಾರಿ ಆಗಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಚಾಂಪಿಯನ್ ಪಟ್ಟ ಅಲಂಕರಿಸಿದರೆ ಯುವರಾಜ್ ಸಿಂಗ್ಗೆ ವಿಶೇಷ ಗೌರವ ಲಭಿಸಲಿದೆ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ಯುವರಾಜ್ ಸಿಂಗ್, ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ (76 ರನ್) ಸಿಡಿಸಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಡಿದ 5 ಇನಿಂಗ್ಸ್ ನಲ್ಲಿ 148 ರನ್ ಗಳಿಸಿದ್ದರು. ಅಲ್ಲದೆ ಒಂದು ವಿಕೆಟ್ ಪಡೆದಿದ್ದರು. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮಹೇಂದ್ರ ಸಿಂಗ್ ಧೋನಿ ಪಡೆಗೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ದ ಯುವರಾಜ್ ಸಿಂಗ್ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.