ತೈಪೆ, ಆ.2- ಭಾರತದ ಬ್ಯಾಡಿಂಟನ್ ತಾರೆಗಳಿಗೆ 18 ವರ್ಷ ಗಳಿಂದ ಮರೀಚಿಕೆ ಆಗಿದ್ದ ತೈಪೆ ಓಪನ್ ಟೂರ್ನಿ ಗೆಲ್ಲುವ ಮೂಲಕ ತಾನ್ವಿ ಶರ್ಮಾ ಅವರು ಆ ಕೊರತೆನೀಗಿಸಿದ್ದಾರೆ. 2008ರಲ್ಲಿ ಭಾರತದ ಬ್ಯಾಡಿಂಟನ್ ತಾರೆ ಸೈನಾ ನೆಹ್ವಾಲ್ ಅವರು 2008ರಲ್ಲಿ ತೈಪೆ ಓಪನ್ ಪ್ರಶಸ್ತಿ ಗೆದ್ದ ನಂತರ ಭಾರತದ ಯಾವುದೇ ಬ್ಯಾಡಿಂಟನ್ ತಾರೆಗೆ ಈ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಕಳೆದ ವರ್ಷ ತಾನ್ವಿ ಶರ್ಮಾ ಅವರು ತೈಪೆ ಓಪನ್ ಫೈನಲ್ ಸುತ್ತಿಗೆ ತಲುಪಿದ್ದರಾದರೂ ಸೋತು ನಿರಾಸೆ ಅನುಭವಿಸಿದ್ದರು. ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 300 ಫೈನಲ್ ಪಂದ್ಯದಲ್ಲಿ ವಿಯೆಟ್ನಾಂನ ಥುಯ್ ಲಿನ್ ನ್ಯೂಯೆನ್ ವಿರುದ್ಧ 21-16, 21-16 ನೇರ ಸೆಟ್‌ಗಳ ಜಯ ಸಾಧಿಸಿದ ತಾನ್ವಿ ಶರ್ಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
