ಬೆಂಗಳೂರು, ನ.20- ಯಾರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್ ಒಂದು ಬಾರಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ, ಅದಕ್ಕೆ ಎಲ್ಲರೂ ಒಪ್ಪಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಾಮಾಧಾನಕ್ಕೆ ಮಾಜಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನ ಸಿಗದ ಹಿನ್ನೆಲೆ ಯತ್ನಾಳ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಒಂದು ಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯತ್ನಾಳ್ ಅವರು ಹಿರಿಯ ನಾಯಕ. ಒಂದು ಬಾರಿ ಪಕ್ಷ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನು ಸರಿ ಮಾಡಿಕೊಂಡು ಪಕ್ಷ ಮುನ್ನಡೆಸಬೇಕು ಹೀಗಾಗಿ ಎಲ್ಲ ಸರಿ ಮಾಡಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆರ್.ಆಶೋಕ್ ನೇಮಕ ಆಗಿದ್ದಾರೆ. ಅದೇ ರೀತಿ ಬಿ.ವೈ. ವಿಜಯೇಂದ್ರ ಕಿರಿಯರು ಎಂಬುದನ್ನು ಒಪ್ಪಿಕೊಳ್ಳುವೆ. ಇಲ್ಲಿ ನನ್ನ ಅಥವಾ ಇನ್ನೊಬ್ಬರ ಇಷ್ಟ, ಕಷ್ಟ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ರಾಷ್ಟ್ರೀಯ ಪಕ್ಷದಲ್ಲಿ ಅದು ಪರಿಗಣನೆಗೆ ಬರುವವುದಿಲ್ಲ ಎಂದು ತಿಳಿಸಿದರು.
ವಿಶ್ವದ ವಿಶ್ವಾಸಾರ್ಹ ಪಕ್ಷ ಬಿಜೆಪಿ; ರಾಜ್‍ನಾಥ್‍ಸಿಂಗ್
ಈಗ ವಿಜೆಯೇಂದ್ರ ಅವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರೂ ಸಹಕಾರವನ್ನು ಅವರಿಗೆ ನಾನು ಸೇರಿದಂತೆ ಕೊಡಬೇಕು. ಆಗ ಮಾತ್ರ ಪಕ್ಷ ಕಟ್ಟಲು ಅನುಕೂಲ ಆಗುತ್ತದೆ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ. ಏನೇ ಅಸಮಾಧಾನ ಇದ್ದರೂ ಸರಿ ಮಾಡಿಕೊಂಡು ಹೋಗೋ ಕೆಲಸ ಮಾಡುವುದಾಗಿ ರಾಮುಲು ಹೇಳಿದರು.