ಬೆಂಗಳೂರು,ಮೇ9-ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜೂನ್ 7ರಿಂದ 2ನೇ ಹಂತದ ಪರೀಕ್ಷೆ ನಡೆಯಲಿದ್ದು, ಆ ಸಂದರ್ಭದಲ್ಲಿ ಯಶಸ್ಸು ಗಳಿಸಲು ಅವಕಾಶಗಳಿವೆ.
ಇಂದು ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ, ಕಡಿಮೆ ಅಂಕ ಗಳಿಸಿರುವ ಅನುಮಾನಗಳಿರುವ ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಪ್ರತಿ ಪಡೆಯಲು ಮರು ಎಣಿಕೆ ಮತ್ತು ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇಂದಿನಿಂದ ಮೇ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಸವಲತ್ತು ಇಲ್ಲದವರಿಗೆ ಆಫ್‌ಲೈನ್‌ನಲ್ಲಿ ಚಲನ್ ಮೂಲಕ ಶುಲ್ಕ ಪಾವತಿಸಲು ಒಂದು ದಿನ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರುವೌಲ್ಯಮಾಪನನಕ್ಕೆ ಮೇ 13ರಿಂದ 22ರ ನಡುವೆ ಅರ್ಜಿ ಸಲ್ಲಿಸಬಹುದಾಗಿದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ಒಂದು ದಿನ ಹೆಚ್ಚುವರಿ ಕಾಲಾವಕಾಶವಿದೆ.
ಜೂ.7ರಿಂದ 14ರವರೆಗೆ ಎಸ್ಸೆಸ್ಸೆಲ್ಸಿ 2ನೇ ಹಂತದ ಪರೀಕ್ಷೆ ನಡೆಯಲಿದೆ. ಈ ಬಾರಿ ಯಶಸ್ವಿಯಾಗದಿರುವರನ್ನು ಎನ್‌ಸಿ ಎಂದು ನಮೂದಿಸಲಾಗಿದೆ. 2 ಮತ್ತು 3ನೇ ಹಂತದಲ್ಲೂ ಉತ್ತೀರ್ಣರಾಗುವಲ್ಲಿ ವಿಫಲರಾದ ವಿದ್ಯಾರ್ಥಿಗಳಿಗೆ ಮಾತ್ರ ಅನುತ್ತೀರ್ಣವೆಂದು ಉಲ್ಲೇಖಿಸುವುದಾಗಿ ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕ ಎಚ್.ಎನ್.ಗೋಪಾಲ ಕೃಷ್ಣ ತಿಳಿಸಿದ್ದಾರೆ.