Thursday, November 21, 2024
Homeರಾಜ್ಯಎಸ್‌‍ಎಸ್‌‍ಎಲ್‌ಸಿ ಟಾಪರ್‌ ಅಂಕಿತಾಗೆ 5 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಿದ ಡಿಸಿಎಂ

ಎಸ್‌‍ಎಸ್‌‍ಎಲ್‌ಸಿ ಟಾಪರ್‌ ಅಂಕಿತಾಗೆ 5 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಿದ ಡಿಸಿಎಂ

ಬೆಂಗಳೂರು,ಮೇ 14- ಎಸ್‌‍ಎಸ್‌‍ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್‌ ಪಡೆದ ಅಂಕಿತ ಬಸವರಾಜ್‌ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 5 ಲಕ್ಷ ರೂ.ಗಳ ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.

ಅಂಕಿತ ಅವರ ಪೋಷಕರು ಮತ್ತು ಶಾಲೆಯ ಶಿಕ್ಷಕರನ್ನು ತಮ ಮನೆಗೆ ಕರೆಸಿಕೊಂಡು ಸನ್ಮಾನಿಸಿದ ಡಿ.ಕೆ.ಶಿವಕುಮಾರ್‌, ಸರ್ಕಾರದ ವತಿಯಿಂದ ಪ್ರಶಂಸನಾ ಪತ್ರ ನೀಡಿದರು.ಅದರ ಮೇಲೆ ದಿನಾಂಕವನ್ನು ಖುದ್ದಾಗಿ ತಾವೇ ನಮೂದಿಸಿದರು. ಜೊತೆಗೆ ತಮ್ಮ ಪುತ್ರಿಯಿಂದಲೂ ಸಹಿ ಹಾಕಿಸಿ ಅಂಕಿತಾ ಅವರಿಗೆ ತಲುಪಿಸುವಂತೆ ತಮ ಸಿಬ್ಬಂದಿಗಳಿಗೆ ಸೂಚಿಸಿದರು. ವೈಯಕ್ತಿಕವಾಗಿ 5 ಲಕ್ಷ ರೂ.ಗಳ ಚೆಕ್‌ ಅನ್ನು ವಿತರಿಸಿದರು. ಜೊತೆಗೆ ತೃತೀಯ ರ್ಯಾಂಕ್‌ ಪಡೆದಿರುವ ಮಂಡ್ಯದ ನವನೀತ್‌ಗೂ 2 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಬಾಗಲಕೋಟೆಯ ಅಂಕಿತಾ 625 ಕ್ಕೆ 625 ಅಂಕ ಗಳಿಸಿ ಪ್ರಥಮ ರ್ಯಾಂಕ್‌ ಪಡೆದಿದ್ದಾರೆ. ನಾನು ಓದುವಾಗಲೂ ಬಹಳಷ್ಟು ಮಂದಿ ರ್ಯಾಂಕ್‌ ಪಡೆಯುತ್ತಿದ್ದರು, ಬೆಂಗಳೂರಿನ ಶಾಲೆಗಳಲ್ಲಿ ರ್ಯಾಂಕ್‌ ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರ್ಯಾಂಕ್‌ ಪಡೆದಿದ್ದು ಶ್ಲಾಘನಾರ್ಹ ಎಂದರು.

ನಾನು ಪ್ರವೃತ್ತಿಯಲ್ಲಿ ರಾಜಕಾರಣಿ. ಆದರೆ ಶೈಕ್ಷಣಿಕ ಸೇವೆ ನನ್ನ ಆಯ್ಕೆ. ರಾಜ್ಯದ ಗ್ರಾಮೀಣ ಭಾಗದಲ್ಲಿನ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಮಾದರಿ ಶಾಲೆಗಳನ್ನು ಆರಂಭಿಸುವುದು ನನ್ನ ಗುರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಸ್‌‍ಆರ್‌ ಅನುದಾನ ಬಳಸಿ ಶಾಲೆಗಳ ನಿರ್ಮಾಣಕ್ಕೆ ಸಹಮತಿ ಸೂಚಿಸಿದ್ದಾರೆ. ಈಗಾಗಲೇ ಸಂಸದ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ರಾಮನಗರದಲ್ಲಿ ಈ ರೀತಿಯ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ನೀತಿ ಸಂಹಿತೆಯ ಕಾರಣಕ್ಕಾಗಿ ಈವರೆಗೂ ಸಭೆಗಳನ್ನು ಮಾಡಿಲ್ಲ. ಇನ್ನು ಮುಂದೆ ನಿರಂತರವಾಗಿ ಸಭೆಗಳನ್ನು ಮಾಡಿ ಶಾಲೆಗಳ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಅವರ ಫಲಿತಾಂಶ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಮರ್ಥರಿದ್ದಾರೆ, ಶಿಕ್ಷಕರೂ ಸಮರ್ಥರು ಎಂಬುದನ್ನು ಸಾಬೀತುಪಡಿಸಿದೆ ಎಂದು ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟರು.

ಇದೇ ವೇಳೆ ಮೊರಾರ್ಜಿ ಶಾಲೆಯ ಪ್ರಾಂಶುಪಾಲರನ್ನು ಡಿ.ಕೆ.ಶಿವಕುಮಾರ್‌ ಅಭಿನಂದಿಸಿದರು.ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಇದು ರಾಜಕಾರಣದ ವಿಚಾರ. ವಿದ್ಯಾರ್ಥಿನಿಯಾಗಿರುವ ನಿನಗೆ ಇದರ ಸಹವಾಸ ಬೇಡ ಎಂದು ಅಂಕಿತಾರನ್ನು ಪಕ್ಕಕ್ಕೆ ಕಳುಹಿಸಿದರು.

RELATED ARTICLES

Latest News