ಬೆಂಗಳೂರು,ಮಾ.21- ಬಿಜೆಪಿಯ ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಎಸ್.ಟಿ. ಸೋಮ ಶೇಖರ್ ಮತ್ತು ಶಿವರಾಂ ಹೆಬ್ಬಾರ್ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಈ ಇಬ್ಬರ ನಾಯಕರ ಭೇಟಿ ಕುತೂಹಲ ಕೆರಳಿಸಿದೆ. ಈ ಮೊದಲು ಕಾಂಗ್ರೆಸ್ನಲ್ಲಿ ಶಾಸಕರಾಗಿದ್ದ ಇಬ್ಬರು ನಾಯಕರು 2019 ರಲ್ಲಿ ನಡೆದ ಆಪರೇಷನ್ ಕಮಲದ ಭಾಗವಾಗಿ ಬಿಜೆಪಿ ಸೇರಿದ್ದರು. ಅಲ್ಲಿ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಪರವಾದ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಮೂಡಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಪರವಾಗಿ ಮತ ಹಾಕುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಅತ್ತ ಶಿವರಾಂ ಹೆಬ್ಬಾರ್ ಪಕ್ಷದ ನಾಯಕರ ಸೂಚನೆಯನ್ನು ಧಿಕ್ಕರಿಸಿ ಗೈರು ಹಾಜರಾಗಿದ್ದರು. ಇಬ್ಬರೂ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿಗಳು ಪದೇಪದೇ ಕೇಳಿಬರುತ್ತಲೇ ಇವೆ. ಆದರೆ ಅವರು ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ.
ಉತ್ತರ ಕನ್ನಡ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವರಾಂ ಹೆಬ್ಬಾರ್ರವರ ಹೆಸರು ಕೇಳಿಬಂದಿತ್ತು. ಬೆಂಗಳೂರು ಉತ್ತರಕ್ಕೆ ಎಸ್.ಟಿ.ಸೋಮಶೇಖರ್ ಅಥವಾ ಅವರ ಪುತ್ರ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಅದೆಲ್ಲವೂ ಹುಸಿಯಾಗಿದ್ದು ಕಾಂಗ್ರೆಸ್ ಬೇರೆಯವರ ಹೆಸರನ್ನು ಈಗಾಗಲೇ ಆಖೈರುಗೊಳಿಸಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇತ್ತೀಚೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡ ಜೆಡಿಎಸ್ನ ಅಭ್ಯರ್ಥಿ ಜವರಾಯಿಗೌಡ ಅವರ ಮನೆಗೆ ಭೇಟಿ ನೀಡಿದ್ದರು. ಪಕ್ಷದ ಶಾಸಕರಾಗಿದ್ದರೂ ಎಸ್.ಟಿ.ಸೋಮಶೇಖರ್ರವರನ್ನು ಶೋಭಾ ಕರಂದ್ಲಾಜೆ ಭೇಟಿ ಮಾಡಿಲ್ಲ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಬೇಕು ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದರು.
ಅತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಶಿವರಾಂ ಹೆಬ್ಬಾರ್ ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಚರ್ಚೆಗಳಿವೆ. ಹೀಗಾಗಿ ಇಂದು ಈ ಇಬ್ಬರೂ ನಾಯಕರು ಡಿ.ಕೆ.ಶಿವಕುಮಾರ್ರನ್ನು ಭೇಟಿ ಮಾಡಿರುವುದು ಗಮನ ಸೆಳೆದಿದೆ.